)
-ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನ ಆವೃತ್ತಿ-5 ಉದ್ಘಾಟಿಸಿದ ಸಿಎಂ । ಟನಲ್ ಯೋಜನೆ ಪರವಾಗಿ ಉದ್ಯಮಿಗಳು ಧ್ವನಿಯೆತ್ತುವಂತೆ ಸಲಹೆ
ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದ್ದು, ಮಹಿಳೆಯರು ಮುಂದೆ ಬರಬೇಕು, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಫ್‌ಕೆಸಿಸಿಐನ ಸಭಾಂಗಣದಲ್ಲಿ ಬುಧವಾರ ನಡೆದ ಉಬುಂಟು ಸಂಸ್ಥೆ ‘ಒಗ್ಗಟ್ಟಾಗಿ ಬೆಳೆಯೋಣ’ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಪುರಾಣಗಳಲ್ಲಿ ದ್ರೌಪದಿ ಹಾಗೂ ಕುಂತಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ, ನಮ್ಮ ಸಂಸ್ಕೃತಿಯಲ್ಲಿ ಗ್ರಾಮದೇವತೆಗಳು ಪ್ರಾಶಸ್ತ್ಯವಿದೆ. ನಿಮಗೆ ಉತ್ತಮ ಅವಕಾಶ, ಪ್ರತಿಭೆಯಿದ್ದು, ನೀವು ನಾಯಕರಾಗಬಹುದು. ಪಕ್ಷಾತೀತವಾಗಿ ಮಹಿಳಾ ಮೀಸಲಾತಿಯನ್ನು ನಾವು ಒಪ್ಪಿದ್ದೇವೆ. ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದೆ. ಈ ದಿಸೆಯಲ್ಲಿ ಶೇ.33 ರಷ್ಟು ಮೀಸಲಾತಿ ಇರುವುದರಿಂದ ಮಹಿಳೆಯರು ನಾಯಕರಾಗುವುದನ್ನು ತಡೆಯುವುದು ಸಾಧ್ಯವಿಲ್ಲ ಎಂದರು.ತಮ್ಮ ಸರ್ಕಾರ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ, ಸಹಾಯಧನ, ಸ್ತ್ರೀಶಕ್ತಿ ಯೋಜನೆ ಸೇರಿದಂತೆ ಅನೇಕ ಮಹಿಳಾ ಆಧರಿತ ಯೋಜನೆಗಳನ್ನು ಜಾರಿ ಮಾಡಿದೆ. ಪ್ರತಿವರ್ಷ ತಯಾರಾಗುವ ವೈದ್ಯರ ಪೈಕಿ, ಶೇ.40ರಷ್ಟು ಮಹಿಳಾ ವೈದ್ಯರಿದ್ದಾರೆ. ನೀವು ಅಡುಗೆಮನೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರು ಉತ್ತಮ ಚಿಂತಕರು ಹಾಗೂ ಉದ್ಯಮಿಗಳು ಎಂದರು.
ಉಬುಂಟು ಮೂಲಕ ಸಾವಿರಾರು ಕನಸುಗಳು ಒಂದಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಬೆಳಯಬೇಕು. ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಯಾವುದೇ ಜವಾಬ್ದಾರಿಯನ್ನು ಅತ್ಯುತ್ತಮ ನಿಭಾಯಿಸಬಲ್ಲಳು ಎನ್ನುವುದು ಈಗಾಗಲೇ ನಿರೂಪಿತವಾಗಿದೆ. ಭಾರತೀಯ ಸಮಾಜದಲ್ಲಿ ಮೊದಲ ಮಗು ಗಂಡು ಆಗಬೇಕೆನ್ನುವ ಭಾವನೆಯಿದೆ. ಈ ಮಾನಸಿಕ ಸ್ಥಿತಿಯಿಂದ ನಾವು ಹೊರಬರಬೇಕು. ಪೋಷಕರಾಗಿ ನಾವು ಮಕ್ಕಳಲ್ಲಿ ಮೌಲ್ಯಗಳು ಹಾಗೂ ಶಿಸ್ತು ಕಲಿಸಬೇಕು. ತಮ್ಮ ಮಗಳು ಒಬ್ಬ ಸಶಕ್ತ ಮಹಿಳೆಯಾಗಿದ್ದು, ಕುಟುಂಬ ಮತ್ತು ಉದ್ಯಮದ ನಿರ್ವಹಣೆಯಲ್ಲಿ ಯಶ್ವಸಿಯಾಗಿದ್ದಾಳೆ ಎಂದರು.
ಬೆಂಗಳೂರು ಮಹಾನಗರದಲ್ಲಿ ಸಂಚಾರದಟ್ಟಣೆ ನಿವಾರಣೆಗೆ ರೂಪಿಸಲಾಗಿರುವ ಟನಲ್ ಯೋಜನೆಗೆ ರಾಜಕೀಯ ಉದ್ದೇಶದಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈ ಯೋಜನೆ ಜನರ ಸಮಯ, ಹಣವನ್ನು ಉಳಿಸಲಿದೆ. ಉದ್ಯಮಿಗಳಾಗಿರುವ ನೀವು, ಈ ಯೋಜನೆಯ ಪರವಾಗಿ ಧ್ವನಿಯೆತ್ತಬೇಕು. ಈಗ ಬೆಂಗಳೂರು ಬೃಹತ್ತಾಗಿ ಬೆಳೆಯುತ್ತಿದ್ದು, 1.4 ಕೋಟಿ ವಾಹನಗಳಿವೆ. ಸರ್ಕಾರ ಬೆಂಗಳೂರಿನ ಸಂಚಾರ ವ್ಯವಸ್ಥೆ ಬಲಪಡಿಸುವ ಮೂಲಸೌಲಭ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭ, ಪೀಣ್ಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸಿಇಒ ಪಾಲಿಸಿ ಬಜಾರ್.ಕಾಮ್ ಸಬ್ವೀರ್ ಸಿಂಗ್ ಹಾಗೂ ಉಬುಂಟು ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.