ಕನ್ನಡಪ್ರಭ ವಾರ್ತೆ ಮಳವಳ್ಳಿ
90 ವರ್ಷದ ಗುರುಬಸವಯ್ಯ ಅವರು ನೀಲಗಾರರ ಪರಂಪರೆಯಿಂದ ಬಂದ ಅಪ್ಪಟ ದೇಶಿ ಜಾನಪದ ಕಲಾವಿದ. ಶಿಕ್ಷಣ ಇಲ್ಲದಿದ್ದರೂ ಮಂಟೆಸ್ವಾಮಿ ಮಹಾಕಾವ್ಯ, ಬಸವಣ್ಣನ ವಚನ, ಗಣಪತ್ ರಾಜನ ಕಥೆ, ಚನ್ನಿಗರಾಮ ಕಥೆ, ಮಹದೇಶ್ವರರ ಕಥೆಗಳನ್ನು ತಂಬೂರಿ ಬಾರಿಸುತ್ತಾ ನಿರಂತರವಾಗಿ ಜಾನಪದ ದಾಟಿಯಲ್ಲಿ ಹಾಡುವುದು ವಿಶೇಷ.
ತಂಬೂರಿ ಹಿಡಿದು ಹಾಡುತ್ತಾ ಬಂದ ಹಣದಲ್ಲಿ ಜೀವನ ಸಾಗಿಸುವುದು ಇವರ ಪ್ರತಿನಿತ್ಯದ ಕಾಯಕ. ಎಷ್ಟೇ ಕಷ್ಟ ಬಂದರೂ ತಂಬೂರಿ ಬಿಡದ ಗುರುಬಸವಯ್ಯ ಅವರು ಇಳಿ ವಯಸ್ಸಿನಲ್ಲೂ ಮನೆ ಮನೆಗೆ ದೇವರ ಪೂಜೆ, ಜನಪದ ಕಾರ್ಯಕ್ರಮಗಳಿಗೂ ಹೋಗಿ ತಂಬೂರಿ, ಗಗ್ಗರ ಢಕ್ಕೆಯನ್ನು ನುಡಿಸುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ.ತಂಬೂರಿ ನುಡಿಸುತ್ತಾ ಜಾನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುವ ನಾನು ಹಿಂದಿನಿಂದಲೂ ಕಷ್ಟ ಅನುಭವಿಸುತ್ತಿರುವ ಗುರುಬಸವಯ್ಯ ನೆಮ್ಮದಿ ಜೀವನಕ್ಕಾಗಿ ನನ್ನ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಾಹಿತಿ ಬಸಪ್ಪ ನೆಲಮಾಕನಹಳ್ಳಿ ಮಾತನಾಡಿ, ಕಲೆಯೇ ಜೀವ, ಕಲೆಯೇ ದೈವವೆಂದು ನಂಬಿರುವ ಹಿರಿಯ ಕಲಾವಿದ ಗುರುಬಸವಯ್ಯ ಅವರಿಗೆ ಕರ್ನಾಟಕ ಜಾನಪದ ಅಕಾಡಮಿಯ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.