ವಿಶೇಷ ಚೇತನ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು: ಬಿಆರ್‌ಸಿ ಶಂಕರ್ ಸಲಹೆ

KannadaprabhaNewsNetwork |  
Published : Feb 22, 2025, 12:45 AM IST
ದಿವ್ಯಾಂಗ ಮಕ್ಕಳನ್ನು ಕ್ರೀಡೆ ಮತ್ತು ವಿವಿಧ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯಕ್ರಮದಲ್ಲಿ ದಿವ್ಯಾಂಗ ಚೇತನ ಮಗುವೊಂದರ ಪೋಷಕರು ಮಗಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಕ್ಕಳೊಂದಿಗೆ ಸಂಭ್ರಮಿಸಿದರು. | Kannada Prabha

ಸಾರಾಂಶ

ದಿವ್ಯಾಂಗ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವನ್ನು ಮೂಡಿಸಲು ಶಿಕ್ಷಣ ಇಲಾಖೆಯು ವಿವಿಧ ಚಟುವಟಿಕೆಗಳನ್ನು ಒಳಗೊಂಡ ಹೊರ ಸಂಚಾರ ಕಾರ್ಯಕ್ರಮ ರೂಪಿಸಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಬಿಆರ್‌ಸಿ ಶಂಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದಿವ್ಯಾಂಗ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವನ್ನು ಮೂಡಿಸಲು ಶಿಕ್ಷಣ ಇಲಾಖೆಯು ವಿವಿಧ ಚಟುವಟಿಕೆಗಳನ್ನು ಒಳಗೊಂಡ ಹೊರ ಸಂಚಾರ ಕಾರ್ಯಕ್ರಮ ರೂಪಿಸಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಬಿಆರ್‌ಸಿ ಶಂಕರ್ ಹೇಳಿದರು.

ಅವರು ಜಾಜೂರು ಸಮೀಪ ಅರಣ್ಯ ಇಲಾಖೆಯ ಸಾಲಮರದ ತಿಮ್ಮಕ್ಕ ಉದ್ಯಾನದಲ್ಲಿ ತಾಲೂಕಿನ 12 ಕ್ಲಸ್ಟರ್‌ಗಳ 80ಕ್ಕೂ ಅಧಿಕ ದಿವ್ಯಾಂಗ ಮಕ್ಕಳನ್ನು ಕರೆದೊಯ್ದು ಕ್ರೀಡೆ ಮತ್ತು ವಿವಿಧ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಕ್ರೀಡೆ, ಹಾಡು, ಚಿತ್ರಕಲೆ ಮತ್ತು ಅವರೇ ನಿರ್ವಹಿಸಬಹುದಾದಂತ ವಿವಿಧ ಸ್ಪರ್ಧೆಗಳು ಮೊದಲಾದ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಇವುಗಳನ್ನು ಶಾಲೆ ಅಥವಾ ಕಚೇರಿ ಸಭಾಂಗಣದಲ್ಲಿ ನಡೆಸಬಹುದಿತ್ತು. ಆದರೆ ಮಕ್ಕಳಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುವ ಎಲ್ಲರಂತೆ ಇವರು ಸಹ ಎಲ್ಲವನ್ನು ಅನುಭವಿಸುವ ಅವಕಾಶವನ್ನು ಕಲ್ಪಿಸಿ ಕೊಡುವ ಚಿಂತನೆಯಲ್ಲಿ ಈ ಸ್ಥಳಕ್ಕೆ ಕರೆತರಲಾಗಿದೆ. ಮಕ್ಕಳು ಬಹಳ ಖುಷಿಯಿಂದ ಪಾಲ್ಗೊಂಡಿದ್ದಾರೆ. ಶಾಲೆಗೆ ಬರಲಾಗದಂತಹ ಮಕ್ಕಳನ್ನು ಪೋಷಕರು ಕರೆ ತಂದಿದ್ದಾರೆ. ತಾಲೂಕಿನಲ್ಲಿ 468 ದಿವ್ಯಂಗ ಚೇತನ ಮಕ್ಕಳಿದ್ದು, ಮೂರು ತಂಡಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾಲೆಕಲ್ ತಿರುಪತಿ ಮತ್ತು ಕಸ್ತೂರಿ ಬಾ ಶಿಬಿರಗಳಲ್ಲಿ ಎರಡು ಕಾರ್ಯಗಾರ ನಡೆಯಲಿದ್ದು, ಉಳಿದ ಮಕ್ಕಳು ಆ ಸ್ಥಳಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಬರಮಾಡಿಕೊಳ್ಳಲಾಗಿದೆ. ಮಕ್ಕಳ ಮನವರಿತು ಅವರಿಗೆ ಸೂಕ್ತವಾದ ಚಟುವಟಿಕೆಗಳನ್ನು ಮಾಡಿಸುತ್ತಾರೆ. ಈ ಪಾರ್ಕಿನಲ್ಲಿ ಮಕ್ಕಳು ಸಂತಸದಿಂದ ಕುಣಿದು ಪ್ರಕೃತಿಯ ಸವಿಯನ್ನು ಅನುಭವಿಸುತ್ತಾ ತಾವು ಆಡಬಹುದಾದ ಆಟಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ನಿಜಕ್ಕೂ ಈ ದೃಶ್ಯ ನಮಗೂ ಸಂತೋಷ ತಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ದಿವ್ಯಾಂಗ ಚೇತನ ಮಕ್ಕಳ ಈ ಶಿಬಿರಕ್ಕೆ ಭೇಟಿ ನೀಡಿ ಶುಭಕೋರಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್, ಫಿಜಿಯೋಥೆರಪಿಸ್ಟ್‌ ಡಾ. ಸಿಮ್ರಾನ್, ಕುಬೇರ ಹಾಗೂ ಚಂದ್ರೇಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್, ಮಧುಮತಿ, ಮಹೇಶ್‌, ಚಿತ್ರಕಲಾ ಶಿಕ್ಷಕ ರಾಜಶೇಖರ್ ಅವಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಿದರು.

ಇದೇ ಸಂದರ್ಭದಲ್ಲಿ ದಿವ್ಯಾಂಗ ಚೇತನ ಮಗುವೊಂದರ ಪೋಷಕರು ಮಗಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಕ್ಕಳೊಂದಿಗೆ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಪೋಷಕರ ಸ್ಪಂದನೆಯೂ ಇತ್ತು, ಸ್ಥಳಾವಕಾಶ ಮಾಡಿಕೊಟ್ಟ ಅರಣ್ಯ ಅಧಿಕಾರಿಗಳಿಗೂ ಕ್ಷೇತ್ರ ಸಮನ್ವಯಾಧಿಕಾರಿ ಕೃತಜ್ಞತೆ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ