ಸಹೃದಯ ಪ್ರತಿಷ್ಠಾನದಿಂದ ಕವಿಗಳ ಆತ್ಮಬಲ ವೃದ್ಧಿ

KannadaprabhaNewsNetwork |  
Published : Jun 13, 2025, 02:17 AM IST
ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನದಡಿ ಹಮ್ಮಿಕೊಂಡ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಮ ಉದ್ಘಾಟಿಸಿದರು. | Kannada Prabha

ಸಾರಾಂಶ

ನಾಗೇಶ ನಾಯಕರವರು ಹುಟ್ಟುಹಾಕಿದ ಪ್ರತಿಷ್ಠಾನದಡಿ ಇಂದು ಈ ಕಾವ್ಯ ಸಮ್ಮಾನವು ನಾಡಿನುದ್ದಗಲಕ್ಕೂ ಪಸರಿಸಿದೆ

ಕನ್ನಡಪ್ರಭ ವಾರ್ತೆ ಸವದತ್ತಿ

ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ಶಕ್ತಿ ದೇವತೆ ನೆಲದಲ್ಲಿ ಕಾವ್ಯಪೂಜೆ ನಡೆಯುತ್ತಿದ್ದು, ಈ ಪ್ರತಿಷ್ಠಾನವು ಕವಿಗಳ ಆತ್ಮಬಲ ವೃದ್ಧಿಸುವ ಬಹುದೊಡ್ಡ ಕಾರ್ಯ ಮಾಡುತ್ತಿದೆ ಎಂದು ಹಿರಿಯ ಕವಿ, ಕಥೆಗಾರ ಡಾ.ಬಸು ಬೇವಿನಗಿಡದ ಹೇಳಿದರು.ಪಟ್ಟಣದ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ.ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಆಯೋಜಿಸಿದ ಕವಿಗೋಷ್ಠಿ ಹಾಗೂ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಗೇಶ ನಾಯಕರವರು ಹುಟ್ಟುಹಾಕಿದ ಪ್ರತಿಷ್ಠಾನದಡಿ ಇಂದು ಈ ಕಾವ್ಯ ಸಮ್ಮಾನವು ನಾಡಿನುದ್ದಗಲಕ್ಕೂ ಪಸರಿಸಿದೆ ಎಂಬುವುದಕ್ಕೆ ಮೂರು ವರ್ಷಗಳಿಂದ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಕವಿಗಳೇ ಸಾಕ್ಷಿಯಾಗಿದ್ದಾರೆ. ಕಾವ್ಯಕ್ಕಾಗಿಯೇ ಮೀಸಲಾಗಿರಿಸಿದ ಈ ಪುರಸ್ಕಾರವು ಯುವ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಕಾರ್ಯ ಮಾಡುತ್ತಿದೆ. ಪ್ರಶಸ್ತಿ ಎನ್ನುವುದು ಇಂದು ಉದ್ಯಮವಾಗಿರುವ ಸಂದರ್ಭದಲ್ಲಿ ಒಂದು ಚಿಕ್ಕ ಪಟ್ಟಣದಲ್ಲಿ ಪ್ರಾಮಾಣಿಕವಾಗಿ ಕರೆದು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ಸಂಗತಿ ಎಂದರು.

ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆಗಳು ವ್ಯವಸ್ಥೆಯನ್ನು ಎಚ್ಚರಿಸುವುದರ ಜೊತೆಗೆ ಅರಾಜಕತೆ ತೊಡೆದು ಹಾಕುವ ಕೆಲಸ ಮಾಡುತ್ತಿವೆ. ಪ್ರಸ್ತುತ ಸನ್ನಿವೇಶಗಳಲ್ಲಿ ಲಾಬಿ, ವಸೂಲಿಗಳಿಂದ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಹೃದಯ ಕಾವ್ಯ ಪ್ರಶಸ್ತಿ ತನ್ನ ಪಾರದರ್ಶಕತೆಯಿಂದ ವಿಭಿನ್ನವಾಗಿ ಗುರುತಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದೆ ಎಂದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಸತಿ ನಿಲಯದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಸೌಭಾಗ್ಯವಾಗಿದೆ. ನಿಲಯದ ಮಕ್ಕಳು ಕನ್ನಡ ಭುವನೇಶ್ವರಿಯ ವರದಾನ ಪಡೆದ ಕವಿಗಳು, ಸಾಹಿತಿಗಳನ್ನು ಕಣ್ಣಾರೆ ಕಂಡು ಅವರ ಮಾತು ಕೇಳಿ ಸ್ಫೂರ್ತಿ ಪಡೆಯುವ ಸದವಕಾಶವನ್ನು ಒದಗಿಸಿಕೊಟ್ಟ ಪ್ರತಿಷ್ಠಾನಕ್ಕೆ ಇಲಾಖೆಯಿಂದ ಕೃತಜ್ಞತೆ ಸಲ್ಲಿಸುವೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಾದ ಡಾ. ಸಿ. ಕೆ. ನಾವಲಗಿ ಸ್ಥೂಲವಾಗಿ ಪ್ರಶಸ್ತಿ ಕೃತಿಗಳ ಒಳನೋಟ ಪರಿಚಯಿಸಿದರು. ಸವಿರಾಜ್ ಆನಂದೂರು, ಡಾ.ದಸ್ತಗೀರ್‌ಸಾಬ್ ದಿನ್ನಿ ಅವರಿಗೆ ತಲಾ ₹೫ ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕದೊಂದಿಗೆ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ನಾಡು-ನುಡಿ ಸೇವೆಗೈದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕವಿಗೋಷ್ಠಿಯಲ್ಲಿ ಎಂ.ಡಿ.ಬಾವಾಖಾನ್, ಗಂಗಾ ಚಕ್ರಸಾಲಿ, ಶಿವರಾಜ್ ಅರಳಿ, ಸೌಮ್ಯ ಕೋಟಗಿ, ಮಂಜುನಾಥ ಸಿಂಗನ್ನವರ, ಎಫ್.ಎಲ್. ಮದಹಳ್ಳಿ, ವೈ.ಬಿ.ಕಡಕೋಳ, ಆನಂದ ಏಣಗಿ, ಬಿ.ಎಂ.ಬಾವಾಖಾನ್, ಚನಬಸಯ್ಯ ಪೂಜೇರ, ಬಸವರಾಜ ಪತ್ತಾರ ಕವಿತೆ ವಾಚಿಸಿದರು. ಮುಖ್ಯ ಅತಿಥಿ, ನಿಲಯ ಪಾಲಕ ಹಾಶೀಮ್ ತಹಸೀಲ್ದಾರ್ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಪ್ರವೀಣ ಶೆಟ್ಟೆಪ್ಪನವರ ಸ್ವಾಗತಿಸಿ, ಎಂ.ಪಿ.ಪಾಟೀಲ ನಿರೂಪಿಸಿ, ಎಸ್.ಬಿ.ಗರಗದ ಗ್ರಂಥ ಸಮರ್ಪಣೆ ಮಾಡಿದರು. ರಮೇಶ್ ತಳವಾರ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ