ಕನ್ನಡಪ್ರಭ ವಾರ್ತೆ ಸಾಗರ
ಬದಲಾದ ಇವತ್ತಿನ ಕಾಲಘಟ್ಟದಲ್ಲಿ ಬದುಕು ತೀರ ಯಾಂತ್ರಿಕವಾಗುತ್ತಿದೆ. ಇಂತಹ ಸಂಕೀರ್ಣ ಕಾಲದಲ್ಲಿ ಮಹಿಳೆಯರು ಜೀವನ, ಪ್ರೀತಿ ನೀಡುವ ಸಂಗತಿಗಳತ್ತ ಮುಖ ಮಾಡಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲೇಖಕಿ ಡಾ. ಶುಭಾ ಮರವಂತೆ ಹೇಳಿದರು.ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಜೀವನ್ಮುಖಿ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜೀವನ ಪ್ರೀತಿ - ಹೊಸದಾರಿ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಹಣದಿಂದಲೇ ಎಲ್ಲ ಸಿಗುತ್ತದೆ ಎನ್ನುವ ಧೋರಣೆ ಸರಿಯಲ್ಲ. ಹಣ ಹೊರತಾಗಿಯೂ ಶ್ರಮ ಸಂಸ್ಕೃತಿಯಿಂದ ದೊರಕುವ ಸಂಪತ್ತಿನಿಂದ ಆತ್ಮಗೌರವ ಪಡೆಯಲು ಸಾಧ್ಯ ಎಂದು ತಿಳಿಸಿದರು. ದೈನಂದಿನ ಬದುಕಿನಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ವಿವಿಧ ಸಾಧ್ಯತೆಗಳಿಗೆ ಮುಖಾಮುಖಿಯಾಗುವ ಮನೋಭಾವ ನಮ್ಮಲ್ಲಿದ್ದರೆ ಸಕಾರಾತ್ಮಕ ಧೋರಣೆ ಬೆಳೆಯುತ್ತದೆ. ಬೀವನದ ಸಂಕಟಗಳನ್ನು ಸೃಜನಶೀಲವಾಗಿ ಎದುರಿಸುವ ಹೆಣ್ಣಿನ ಸಹಜ ಶಕ್ತಿಯನ್ನು ದೌರ್ಬಲ್ಯ ಅಥವಾ ಮಿತಿ ಎಂದು ಪರಿಗಣಿಸಬಾರದು ಎಂದು ಹೇಳಿದರು.ಹೆಣ್ತನವೇ ಜಗತ್ತನ್ನು ಕಾಯುತ್ತಿರುವ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದ್ದರೂ, ಹೆಣ್ಣಿಗೆ ಹೆಣ್ಣೆ ಶತೃ ಎಂಬ ಸುಳ್ಳು ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಮಹಿಳೆಯರು ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಬೆಳವಣಿಗೆ ಹೊಂದಿದಾಗ ಇಂತಹ ಭ್ರಮೆಯ ಪೊರೆ ಕಳಚಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.ಚರಕ ಸಂಸ್ಥೆಯ ಗೌರಮ್ಮ, ಜೀವನ್ಮುಖಿ ಸಂಸ್ಥೆಯ ಚೂಡಾಮಣಿ ರಾಮಚಂದ್ರ ಇನ್ನಿತರರು ಉಪಸ್ಥಿತರಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಂಗವಾಗಿ ನಡೆಸಿದ್ದ ಒಲೆರಹಿತ ಅಡುಗೆ ಸ್ಪರ್ಧೆಯಲ್ಲಿ ಮಲೆನಾಡು ಸ್ನೇಹಿತರು ಹಂದಿಗೋಡು ಪ್ರಥಮ ಬಹುಮಾನ ಪಡೆದರು. ಹೆಗ್ಗೋಡು ಗ್ರಾಮದ ವಂಡರಿಂಗ್ ಬರ್ಡ್ಸ್ ದ್ವಿತೀಯ, ಕಾನುಗೋಡು ಗ್ರಾಮದ ತ್ರಿವೇಣಿ ಸಂಘ ತೃತೀಯ, ಶಿವಮೊಗ್ಗದ ಅಕ್ಕಮಹಾದೇವಿ ಮಹಿಳಾ ಸಂಘ, ಮಾಲ್ವೆಯ ಸೋಮೇಶ್ವರ ಸ್ವಸಹಾಯ ಸಂಘ ಸಮಾಧಾನಕರ ಬಹುಮಾನ ಪಡೆದುಕೊಂಡರು.