ಸಿರುಗುಪ್ಪ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ₹2,000 ಸಹಾಯಧನದ ಸದ್ಬಳಕೆ ಕುರಿತು ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಾತನಾಡಿದ ಫಲಾನುಭವಿಗಳು, ಗೃಹಲಕ್ಷ್ಮಿ ಯೋಜನೆಯ ಹಣ ಉಳಿತಾಯ ಮಾಡಿ ಹಾಗೂ ನಿತ್ಯದ ಅಗತ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿರುವ ಯಶೋಗಾಥೆ ವಿವರಿಸಿದರು. ಕೆಲವರು ಈ ಹಣದಿಂದ ಟೀ ಸ್ಟಾಲು, ಕಿರಾಣಿ ಅಂಗಡಿ ಹಾಗೂ ಬಟ್ಟೆ ಅಂಗಡಿ ತೆರೆದು ಸ್ವ-ಉದ್ಯೋಗ ಕಂಡುಕೊಂಡಿದ್ದರೆ ಮತ್ತೆ ಕೆಲವರು ಕುಟುಂಬದ ನಿರ್ವಹಣೆಗಾಗಿ ಮನೆ ಬಾಡಿಗೆ ಕಟ್ಟಲು, ಮನೆಯ ಗೃಹಬಳಕೆ ವಸ್ತುಗಳ ಖರೀದಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಇನ್ನೂ ಹಲವು ಕುಟುಂಬಗಳಿಗೆ ಈ ಹಣ ಸಂಜೀವಿನಿಯಂತೆ ಕೆಲಸ ಮಾಡಿದ್ದು, ಪಾರ್ಶ್ವವಾಯು ಪೀಡಿತರ ಮಾತ್ರೆ ಹಾಗೂ ಔಷಧೋಪಚಾರ, ಕಣ್ಣಿನ ಚಿಕಿತ್ಸೆ, ಥೈರಾಯ್ಡ್ ಮತ್ತು ಕಿಡ್ನಿ ಸ್ಟೋನ್ ಚಿಕಿತ್ಸೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳ ವೆಚ್ಚ ಭರಿಸಲು ನೆರವಾಗಿದೆ. ಇದರೊಂದಿಗೆ ಹಿರಿಯರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಹಾಗೂ ಅಂಧರಿಗೆ ಆಶ್ರಯ ಕಲ್ಪಿಸುವಂತಹ ಮಾನವೀಯ ಕಾರ್ಯಗಳಿಗೂ ಈ ಹಣ ಸದ್ಬಳಕೆಯಾಗುತ್ತಿರುವುದು ಸಂವಾದದಲ್ಲಿ ಗಮನ ಸೆಳೆಯಿತು.ಶಿಶು ಯೋಜನಾಭಿವೃದ್ದಿ ಅಧಿಕಾರಿ ಜಿ. ಪ್ರದೀಪ್ ಮಾತನಾಡಿ, ತಾಲೂಕಿನ ಗೃಹಲಕ್ಷ್ಮಿ ಯೋಜನೆಯ ಪ್ರಗತಿಯ ಅಂಕಿಅಂಶ ಮಾಹಿತಿ ಹಂಚಿಕೊಳ್ಳಲಾಯಿತು. ಅಕ್ಟೋಬರ್-2026ರ ವರದಿಯಂತೆ ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು 66,810 ಅರ್ಹ ಫಲಾನುಭವಿಗಳಿದ್ದು, ಈ ಪೈಕಿ 63,573 ಫಲಾನುಭವಿಗಳಿಗೆ ₹12.71 ಕೋಟಿ ವೆಚ್ಚದಲ್ಲಿ ಹಣ ಪಾವತಿಸುವ ಮೂಲಕ ಶೇ.95.15ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದಂತೆ 520 ಮಂದಿ ಆದಾಯ ತೆರಿಗೆ/ಜಿಎಸ್ಟಿ ಪಾವತಿದಾರರಾಗಿದ್ದು, 223 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಹಣ ಜಮೆಯಾಗಿಲ್ಲ ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕರಿಬಸಪ್ಪ, ರೇಷ್ಮೆ ಕೃಷಿ ನಿಗಮದ ಸದಸ್ಯ ಎಚ್.ಗಣೇಶ ಮಾತನಾಡಿದರು. ಮುಖಂಡ ಉಮೇಶ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಫಲಾನುಭವಿಗಳು ಭಾಗವಹಿಸಿದ್ದರು.