ಕನ್ನಡಪ್ರಭ ವಾರ್ತೆ, ತುಮಕೂರುಕಾಡುಗೊಲ್ಲರ ಹೆಸರು ಹೇಳಿಕೊಂಡು, ರಾಜಕೀಯ ಅಧಿಕಾರ ಪಡೆದು, ಕಾಡುಗೊಲ್ಲರನ್ನೇ ತುಳಿಯಲು ಹೊರಟಿರುವ ಡಿ.ಟಿ.ಶ್ರೀನಿವಾಸ್ ಅವರು ಏಪ್ರಿಲ್ 20 ರಂದು ಚಿಕ್ಕೋಡಿಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ಶತಮಾನೋತ್ಸವಕ್ಕೆ ಸ್ವಾಭಿಮಾನಿ ಕಾಡುಗೊಲ್ಲರು ಭಾಗವಹಿಸಬಾರದು ಎಂದು ಕಾಡುಗೊಲ್ಲರ ಮುಖಂಡ ಶಂಕರಪ್ಪ ಕೆರೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರನ್ನು ಎಸ್.ಟಿ. ಜಾತಿಪಟ್ಟಿಗೆ ಸೇರಿಸಲು, ಕಾಡುಗೊಲ್ಲರ ಅಭಿವೃದ್ದಿ ನಿಗಮದ ನೆನೆಗುದಿಗೆ ಬೀಳಲು ಕಾರಣ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮತ್ತು ಅವರ ಪತ್ನಿ ಪೂರ್ಣಿಮ ಶ್ರೀನಿವಾಸ್. ಈಗ ವಿಧಾನಪರಿಷತ್ ಸದಸ್ಯರಾಗಿರುವ ನಾಗರಾಜ್ ಯಾದವ್ ಅವರ ರಾಜಕೀಯ ಜೀವನ ಮುಗಿಸಲು, ಅವರ ಪತ್ನಿಯವರ ಸ್ವಕ್ಷೇತ್ರ ಚಿಕ್ಕೋಡಿಯಲ್ಲಿ ಯಾದವ ಸಮಾವೇಶ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಸ್ವಾಭಿಮಾನಿ ಕಾಡುಗೊಲ್ಲರು ಚಿಕ್ಕೋಡಿಯ ಸಮಾವೇಶದಲ್ಲಿ ಪಾಲ್ಗೊಳ್ಳಬಾರದು ಎಂದರು.
ರಾಜ್ಯದ ಸುಮಾರು 12 ಜಿಲ್ಲೆಗಳ 43 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲ ಜನಾಂಗವಿದೆ. ಯಥಪ್ಪ, ಚುಂಚಪ್ಪನನ್ನು ಆರಾಧಿಸುವ ಕಾಡುಗೊಲ್ಲರಿಗೂ, ಶ್ರೀಕೃಷ್ಣನನ್ನು ಆರಾಧಿಸುವ ಗೊಲ್ಲ(ಯಾದವ)ರಿಗೂ ಸಂಬಂಧವಿಲ್ಲ. ನಮ್ಮದು ಬುಡಕಟ್ಟು ಸಮುದಾಯ.1891,1901 ಮತ್ತು 1911ರ ಜಾತಿಗಣತಿಯಲ್ಲಿ ಕಾಡುಗೊಲ್ಲ ಎಂದು ಪ್ರತ್ಯೇಕವಾಗಿಯೇ ಇದ್ದ ನಾವುಗಳು, 1924ರಲ್ಲಿ ಅಸ್ಥಿತ್ವಕ್ಕೆ ಬಂದ ಕರ್ನಾಟಕ ರಾಜ್ಯಗೊಲ್ಲ(ಯಾದವ), ಸಂಘ(ರಿ), ಅಂದು ಮೈಸೂರು ಮಹಾರಾಜರಿಗೆ ಮನವಿ ಸಲ್ಲಿಸಿ, ಎಲ್ಲಾ ಗೊಲ್ಲರನ್ನು ಯಾದವ ಎಂದು ಪರಿಗಣಿಸುವಂತೆ ಕೋರಿದ್ದರು.ಇದು ಕಾಡುಗೊಲ್ಲರಿಗೆ ಮರಣ ಶಾಸನವಾಯಿತು ಎಂದರು.ಆ ನಂತರ ಕಾಡುಗೊಲ್ಲ ಎಂಬ ಸಮುದಾಯ ಅಸ್ವಿತ್ವವನ್ನು ಕಳೆದುಕೊಳ್ಳುವಂತಾಯಿತು.ಈ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕಾಡುಗೊಲ್ಲ ಸಮುದಾಯ ಪ್ರಭಲವಾಗಿ ವಿರೋಧಿಸದ ಕಾರಣ, ಕಾಡುಗೊಲ್ಲ, ಗೊಲ್ಲ, ಯಾದವ ಎಲ್ಲಾ ಒಂದೇಜಾತಿ ಪಟ್ಟಿಗೆ ಸೇರಿದ ಪರಿಣಾಮ,ಪ್ರವರ್ಗ ಒಂದರಲ್ಲಿ ಬರುವ ಬಹುಪಾಲ ಮೀಸಲಾತಿಯನ್ನು ಗೊಲ್ಲರೇ ಬಳಸಿಕೊಂಡು, ಕಾಡುಗೊಲ್ಲರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿಯಲು ಕಾರಣ ವಾಯಿತು ಎಂದು ಶಂಕರಪ್ಪ ವಿವರ ನೀಡಿದರು.ರಾಜ್ಯ ಸರಕಾರ ಕಾಡುಗೊಲ್ಲರನ್ನು ಎಸ್.ಟಿ. ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸ್ಸು ಮಾಡಿದೆ.ಇದಕ್ಕೆ ಪ್ರಮುಖ ಕಾರಣರಾದವರು ಎಂ.ಎಲ್.ಸಿ. ನಾಗರಾಜ ಯಾದವ್, ಇವರು ಬೆಳಗಾವಿಯಲ್ಲಿ ತಮ್ಮರಾಜಕೀಯ ಅಸ್ಥಿತ್ವ ಕಂಡುಕೊಳ್ಳುವ ತವಕದಲ್ಲಿದ್ದಾರೆ. ಇಂತಹ ವೇಳೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಯಾದವ ಸಮಾವೇಶ ಮಾಡುವ ಮೂಲಕ ಅವರನ್ನು ರಾಜಕೀಯವಾಗಿ ಮುಗಿಸಲು ಡಿ.ಟಿ.ಶ್ರೀನಿವಾಸ್ ಮತ್ತು ತಂಡ ಹೊರಟಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಡುಗೊಲ್ಲರ ಸಂಘ ಗೌರವಾಧ್ಯಕ್ಷ ಎಸ್.ಡಿ.ಬಸವರಾಜು, ಪ್ರಭಾರಿ ಅಧ್ಯಕ್ಷ ಜಿ.ರಮೇಶ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ನಾಗರಾಜು, ರಾಜಕುಮಾರ್, ವೆಂಕಟೇಶ್, ದೊಡ್ಡಯ್ಯ, ಶಿವಣ್ಣ, ಚಿಕ್ಕಣ್ಣ, ರವಿ ಜಕ್ಕೇನಹಳ್ಳಿ, ತಿಮ್ಮಪ್ಪ, ಬಾಲಯ್ಯ, ಕೆ.ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.