ಮನೋನಿಗ್ರಹವೇ ನಿಜವಾದ ಯೋಗ: ಶ್ರೀ ಸುಗುಣೇಂದ್ರ ತೀರ್ಥರು

KannadaprabhaNewsNetwork | Published : Jun 22, 2024 12:49 AM
Follow Us

ಸಾರಾಂಶ

ಗೀತಾಮಂದಿರದಲ್ಲಿ, ಪರ್ಯಾಯ ಪುತ್ತಿಗೆ ಮಠ ಹಾಗೂ ಪರೀಕದ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ - ಸೌಖ್ಯವನ ಇದರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯೋಗ ಎಂದರೆ ಕೇವಲ ಆಸನ ಪ್ರಾಣಾಯಾಮಗಳಲ್ಲ, ಮನಸ್ಸನ್ನು ನಿಯಂತ್ರಿಸುವುದೇ ನಿಜವಾದ ಯೋಗ ಎಂದು ಶ್ರೀ ಕೃಷ್ಣಮಠದ ಪರ್ಯಾಯ ಪೀಠಾಧೀಶ, ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಶುಕ್ರವಾರ ಗೀತಾಮಂದಿರದಲ್ಲಿ, ಪರ್ಯಾಯ ಪುತ್ತಿಗೆ ಮಠ ಹಾಗೂ ಪರೀಕದ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ - ಸೌಖ್ಯವನ ಇದರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ವಿಶ್ವ ಯೋಗ ದಿನಾಚರಣೆ ಭಾರತೀಯ ಸಂಸ್ಕೃತಿಗೆ ಮುಕುಟಪ್ರಾಯವಾಗಿದೆ. ಯೋಗಕ್ಕೆ ಈಶ್ವರನೇ ಕೃಷ್ಣ, ಕೃಷ್ಣ ಬೋಧಿಸಿದ ಭಗವದ್ಗೀತೆಯ ಕೊನೆಯ ಸಂದೇಶ, ಯಾರೂ ಯೋಗವನ್ನು ಅನುಸರಿಸುತ್ತಾರೋ ಅವರಿಗೆ ವಿಜಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಆದ್ದರಿಂದ ಕೃಷ್ಣನ ಮೂಲ ಸಂದೇಶವೇ ಯೋಗವಾಗಿದೆ ಎಂದರು.

ಆದರೆ ಯೋಗ ಎಂದರೆ ಕೇವಲ ಆಸನ, ಪ್ರಾಣಾಯಾಮವಲ್ಲ, ಜೀವನದ ಎಲ್ಲಾ ಕ್ರಿಯೆಗಳನ್ನು ಪರಿಪೂರ್ಣ ಮನಸ್ಸಿನಿಂದ ನಡೆಸಿದರೆ ಅದೂ ಯೋಗವೇ ಆಗಿರುತ್ತದೆ. ಅದನ್ನೇ ಮನೋಯೋಗ ಎನ್ನುತ್ತಾರೆ, ಅಂದರೆ ಮನಸ್ಸನ್ನು ನಿಯಂತ್ರಿಸುವುದು ಎಂದರ್ಥ ಎಂದವರು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಿನಕ್ಕೆ ಒಂದಿಷ್ಟು ಹೊತ್ತನ್ನು ಯೋಗಕ್ಕೆ ಮೀಸಲಿಟ್ಟರೆ ದೇಹದ ಜೊತೆಗೆ ಸಮಾಜವೂ ಆರೋಗ್ಯಕರವಾಗುತ್ತದೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್.ಸೀತಾರಾಮ ತೋಳ್ಪಡಿತ್ತಾಯ, ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಇದಕ್ಕೆ ಮೊದಲು ಸೌಖ್ಯವನದ ವೈದ್ಯರು, ವಿದ್ಯಾರ್ಥಿಗಳು ಮತ್ತು ನೂರಾರು ಸಂಖ್ಯೆಯ ಯೋಗಾಸಕ್ತರು ಉಡುಪಿ ಕ್ಲಾಕ್ ಟವರ್‌ನಿಂದ ಕೃಷ್ಣಮಠದ ವರೆಗೆ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.