ಕನ್ನಡಪ್ರಭ ವಾರ್ತೆ ಶಹಾಪುರ
ಸಾಮಾಜಿಕ ಕಾರ್ಯಗಳಿಂದ ಸಿಗುವಷ್ಟು ಆತ್ಮತೃಪ್ತಿ ಬೇರೆ ಯಾವುದರಿಂದ ಸಿಗುವುದಿಲ್ಲ ಎಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಸ್ವಾಮೀಜಿ ಹೇಳಿದರು.ತಾಲೂಕಿನ ಇಬ್ರಾಹಿಂಪೂರ ಗ್ರಾಮದ ಸದ್ಗುರು ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ನಡೆದ 2ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಭಗವಂತ ನಮಗೆ ನೀಡಿರುವ ದೈನಂದಿನ ಕಾಯಕದ ಜೊತೆಗೆ ಸಂಪಾದಿಸಿದ ಸ್ವಲ್ಪ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರೆ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ. ಅಲ್ಲದೇ ಅಂತಹ ವ್ಯಕ್ತಿಗಳ ಸಾಧನೆ, ಹೆಸರು ಚರಿತ್ರೆಯಲ್ಲಿ ಉಳಿಯುತ್ತದೆ ಎಂದರು.ಈ ದಿಸೆಯಲ್ಲಿ ಯುವಕರಾಗಿರುವ ಮಹಾರಾಜ ದಿಗ್ಗಿಯವರು ಇಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವ ಮೂಲಕ ಸಾಮರಸ್ಯ ವಾತಾವರಣ ಸೃಷ್ಟಿ ಮಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ. ಎಲ್ಲಾ ವರ್ಗದ ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ. ಇದು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಸರೂರ-ಅಗತೀರ್ಥ ಗುರು ಪೀಠದ ಶಾಂತಮಯ ಮಹಾಸ್ವಾಮೀಜಿ ಮಾತನಾಡಿ, ನಾಗರಿಕ ಸಮಾಜದಲ್ಲಿ ಎಲ್ಲರಿಗೂ ಮದುವೆ ಎಂಬುದು ಮಹತ್ವದ ಘಟ್ಟ, ಸಾಯಿಬಾಬಾ ಪವಿತ್ರ ದೇವಸ್ಥಾನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವ ವಧು-ವರರ ಬದುಕು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳುವ ಮೂಲಕ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಸಾಗಲಿ ಎಂದರು.ಚಿಗರಳ್ಳಿಯ ಕಬೀರಾನಂದ ಮಹಾಸ್ವಾಮೀಜಿ ಮಾತನಾಡಿ, ಎಲ್ಲರೂ ಧರ್ಮದ ಹಾದಿಯಲ್ಲಿ ಬಸವಾದಿ ಶರಣರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರೋಪಕಾರಿಯಾಗಿ ಬಾಳಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಎಂದರು.
ಮಾಲಹಳ್ಳಿಯ ಕೆಂಚರಾಯ ಪೂಜಾರಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ನಿಸರ್ಗದ ಕೋಪದಿಂದ ರಾಜ್ಯದಲ್ಲಿ ಭೀಕರ ಬರಗಾಲ ಉದ್ಭವಿಸಿದೆ. ಇಂತಹ ಸಮಯದಲ್ಲಿ ಸಾಯಿ ಬಾಬಾನ ಜಾತ್ರೆ ನಡೆದಿದೆ. ಭಗವಂತನ ದಯೆಯಿಂದ ಚೆನ್ನಾಗಿ ಮಳೆ-ಬೆಳೆಯಾಗಿ ರೈತಾಪಿ ವರ್ಗದ ಸಂಕಷ್ಟಗಳು ದೂರವಾಗಲಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಯಿ ಮಂದಿರದ ಅಧ್ಯಕ್ಷರಾದ ಮಹಾರಾಜ್ ದಿಗ್ಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 14 ಜೋಡಿ ನವ ವಧು-ವರರಿಗೆ ಎಲ್ಲಾ ಶ್ರೀಗಳು, ಗಣ್ಯರು ಶುಭ ಹಾರೈಸಿದರು.
ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗರಾಜೇಂದ್ರ ಸ್ವಾಮಿಜಿ, ಸೂಗೂರ ಎನ್. ಭೋಜಲಿಂಗೇಶ್ವರ ಸಿದ್ಧಸಂಸ್ಥಾನ ಮಠದ ಹಿರಗಪ್ಪ ತಾತನವರು, ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ, ಹೋತಪೇಟ್‌ದ ಕೈಲಾಸ ಮಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ, ಗೋಗಿಯ ಸೈಯದ್ ಷಾ ಚಾಂದ್ ಹುಸೇನಿ, ಶಹಾಬಾದದ ಅಪ್ಪಣ್ಣ ಶ್ರೀಗಳು, ಗಬ್ಬೂರವಾಡಿಯ ಬಳಿರಾಮ ಮಹಾರಾಜರು, ದೇವಸ್ಥಾನದ ಕಾರ್ಯದರ್ಶಿ ಸಿದ್ದಪ್ಪಾಜಿ, ಸಿದ್ದಣ್ಣ ದಿಗ್ಗಿ, ಭೀಮರಡ್ಡಿ ರಾಂಪೂರಹಳ್ಳಿ ಹತ್ತಿಕುಣಿ, ಗೌಡಪ್ಪಗೌಡ ಆಲ್ದಾಳ, ಭೀಮಾಶಂಕರ ಇಬ್ರಾಹಿಂಪೂರ, ಶಂಕ್ರಪ್ಪ ಶಾಣೇನೋರ ದೋರನಹಳ್ಳಿ, ಶ್ರೀಶೈಲ ಹೊಸಮನಿ, ಬಸವರಾಜ ರಾಠೋಡ, ಮಲ್ಲಿಕಾರ್ಜುನ ಮೌನೇಶ ಹಳಿಸಗರ, ಡಾ. ರವೀಂದ್ರನಾಥ ಹೊಸಮನಿ ಸೇರಿದಂತೆ ಇತರರಿದ್ದರು.ಹಾಸ್ಯ ಕಲಾವಿದ ಮಹಾಂತೇಶ ಹುಲ್ಲೂರ, ರಾಜಶೇಖರ ಹುಲ್ಲೂರ, ಸಂಗೀತ ಕಾಯಕ್ರಮ ನಡೆಸಿಕೊಟ್ಟರು. ರಾಜಶೇಖರ ದಿಗ್ಗಿ ಸ್ವಾಗತಿಸಿದರು. ಬಸವರಾಜ ಗುರೂಜಿ ನಿರೂಪಿಸಿದರು. ಮಾಳಪ್ಪ ಯಾದವ ಕಾಡಂಗೇರಾ ವಂದಿಸಿದರು.