ನಿಸ್ವಾರ್ಥ ಸೇವೆಯೇ ನಮ್ಮ ಸಂಸ್ಥೆಯ ಮ್ಯಾಜಿಕ್: ಸದ್ಗುರು ಶ್ರೀ ಮಧುಸೂದನ ಸಾಯಿ

KannadaprabhaNewsNetwork |  
Published : Aug 20, 2026, 02:15 AM IST
ಸಂವಾದ ನಡೆಯಿತು. | Kannada Prabha

ಸಾರಾಂಶ

ನಿಸ್ವಾರ್ಥ ಪ್ರೀತಿ ಮತ್ತು ಸೇವೆಯ ಮೂಲಕ ಮಾತ್ರ ದೀರ್ಘಕಾಲದ ಸಂಬಂಧಗಳನ್ನು ಬೆಳೆಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಕಾರವಾರ

ನಿಸ್ವಾರ್ಥ ಪ್ರೀತಿ ಮತ್ತು ಸೇವೆಯ ಮೂಲಕ ಮಾತ್ರ ದೀರ್ಘಕಾಲದ ಸಂಬಂಧಗಳನ್ನು ಬೆಳೆಸಲು ಸಾಧ್ಯ. ನಮ್ಮ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ಅಥವಾ ಚಿಕಿತ್ಸೆ ಪಡೆದವರು ಕೋರ್ಸ್‌ ಪೂರ್ಣಗೊಂಡ ಬಳಿಕವೂ ಸುದೀರ್ಘ ಒಡನಾಟ ಹೊಂದಿರುವುದಕ್ಕೆ ನಿಸ್ವಾರ್ಥ ಪ್ರೀತಿ ಮತ್ತು ಸೇವೆಯೇ ಕಾರಣ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ನಗರದಲ್ಲಿ ಬುಧವಾರ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಿಸ್ವಾರ್ಥ ಪ್ರೀತಿ ಇರುವ ಸಂಬಂಧಗಳು ಮಾತ್ರ ದೀರ್ಘಕಾಲ ಉಳಿಯುತ್ತವೆ. ನಾವು ಬೇರೆಯವರಿಗೆ ಪ್ರೀತಿ ಕೊಡಲೆಂದೇ ಹುಟ್ಟಿದ್ದೇವೆ. ಉಳಿದದ್ದೆಲ್ಲ ನಂತರದ್ದು ಎಂಬ ಭಗವಾನ್ ಸತ್ಯ ಸಾಯಿ ಬಾಬಾ ಅವರ ಮಾತನ್ನು ತಮ್ಮ ಸಂಸ್ಥೆಗಳಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.ತಮ್ಮ ಸಂಸ್ಥೆಯಲ್ಲಿ ಓದುವ ಮಕ್ಕಳು ನಿಸ್ವಾರ್ಥ ಪ್ರೀತಿಯನ್ನು ಅನುಭವಿಸಿ ಸಂಸ್ಥೆಯೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಪ್ರವಾಸಿಗರು ಹಾಗೂ ಸಂದರ್ಶಕರಾಗಿ ಬಂದವರೂ ದೀರ್ಘಾವಧಿಗೆ ಒಡನಾಟ ಹೊಂದುವುದು ನಿಸ್ವಾರ್ಥ ಪ್ರೇಮದ ಶಕ್ತಿ ಎಂದು ವಿವರಿಸಿದರು.ಪ್ರಾಚೀನ ಗುರುಕುಲ ಪದ್ಧತಿಯ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮಹಾಭಾರತದಲ್ಲಿ ಕುಚೇಲ ಮತ್ತು ಶ್ರೀಕೃಷ್ಣ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ ಕಥೆಯಂತೆ, ಶಿಕ್ಷಣವು ಕೇವಲ ವಾಣಿಜ್ಯವಾಗದೆ ಮೌಲ್ಯಾಧಾರಿತವಾಗಿರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದಾಗ ಮಾತ್ರ ವಸುಧೈವ ಕುಟುಂಬಕಂ ಎಂಬ ಭಾವನೆ ಸಮಾಜದಲ್ಲಿ ಗಟ್ಟಿಯಾಗುತ್ತದೆ ಎಂದು ಹೇಳಿದರು.ಪ್ರವಚನವನ್ನು ಯಾರು ಬೇಕಾದರೂ ನೀಡಬಹುದು. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಸಾಧನಗಳೂ ಪ್ರವಚನ ನೀಡುವಷ್ಟು ಬೆಳೆದಿವೆ. ಆದರೆ ಹೇಳಿದ ಮಾತಿನಂತೆ ನಡೆದುಕೊಂಡಾಗ ಮಾತ್ರ ಅದಕ್ಕೆ ನಿಜವಾದ ಬೆಲೆ ಬರುತ್ತದೆ. ಸೇವೆಯ ಮೂಲಕ ಇಡೀ ಜಗತ್ತನ್ನು ಒಂದು ಮಾಡಬಹುದು ಹಾಗೂ ಅಪನಂಬಿಕೆಯನ್ನು ನಿವಾರಿಸಬಹುದು. ಫಿಜಿ, ಇರಾನ್, ಟರ್ಕಿ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಪ್ರವಚನಕ್ಕಿಂತ ಸೇವೆಯ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಿದ್ದೇವೆ ಎಂದು ಸದ್ಗುರು ಹೇಳಿದರು.ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಡಾ. ಬಿ.ಎನ್. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರವಾರ ರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀ ಭಾವೇಶಾನಂದ ಸ್ವಾಮೀಜಿ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಮಾಜಿ ಸಚಿವ ಆನಂದ್ ಆಸ್ನೋಟಿಕರ್, ಮಾಜಿ ಶಾಸಕ ಗಂಗಾಧರ ಭಟ್ ಹಾಗೂ ಕೆನರಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಸ್.ಪಿ. ಕಾಮತ್ ಉಪಸ್ಥಿತರಿದ್ದರು. ಸತ್ಯ ಸಾಯಿ ನಾದ ಗುರುಕುಲಂ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ:ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ‘ದಿವ್ಯ ಸಂಜೆ’ ಸಂವಾದದಲ್ಲೂ ಪ್ರಸ್ತಾಪವಾಯಿತು. ಸಭಿಕರೊಬ್ಬರು ಮುದ್ದೇನಹಳ್ಳಿಯಲ್ಲಿರುವ ಆಸ್ಪತ್ರೆಯ ಮಾದರಿಯಲ್ಲಿ ಉತ್ತರ ಕನ್ನಡದಲ್ಲಿಯೂ ಆಸ್ಪತ್ರೆ ಸ್ಥಾಪಿಸುವಂತೆ ಸದ್ಗುರುಗಳಲ್ಲಿ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಯಾವುದೇ ಸಂಸ್ಥೆ ಆರಂಭಿಸಲು ಜನ ಮತ್ತು ಧನ ಎರಡೂ ಅಗತ್ಯ. ಮುದ್ದೇನಹಳ್ಳಿಗೆ ಬೆಂಗಳೂರಿನಿಂದ ವೈದ್ಯರು ಬರುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ಅಗತ್ಯ ಪ್ರಮಾಣದ ವೈದ್ಯರು ಸಿಗುವುದು ಸವಾಲಾಗಿದೆ. ಪ್ರಸ್ತುತ ತಮ್ಮ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧರಾಗುತ್ತಿದ್ದು, ಅವರ ವಿದ್ಯಾಭ್ಯಾಸ ಪೂರ್ಣಗೊಳ್ಳುವ ವೇಳೆಗೆ ಕಟ್ಟಡ ಹಾಗೂ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾದರೆ ಮತ್ತು ದಾನಿಗಳು ಕೈಜೋಡಿಸಿದರೆ, ಇನ್ನೂ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ಸ್ಥಾಪಿಸಬಹುದು ಎಂದು ಭರವಸೆ ನೀಡಿದರು.ಪ್ರಸ್ತುತ ಜಿಲ್ಲೆಯಲ್ಲಿ ಎರಡು ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ತಮ್ಮ ಸಂಸ್ಥೆಯಿಂದ ಸಾಧ್ಯವಿರುವ ಎಲ್ಲ ಸೇವೆಗಳನ್ನು ಜಿಲ್ಲೆಗೆ ನೀಡುವುದಾಗಿ ಸದ್ಗುರು ಪುನರುಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕತೆಗೆ ತಕ್ಕಂತೆ ಛಾಯಾಗ್ರಹಣ ಉದ್ಯಮ ಬೆಳೆಯಲಿ: ಮಿಥುನ ಪಾಟೀಲ
ಕೂಲಿಕಾರರು ವಿಬಿ ಜಿ ರಾಮ್‌ ಜಿ ಯೋಜನೆಯ ಲಾಭ ಪಡೆಯಲಿ: ಚಂದ್ರಶೇಖರ ಬಿ. ಕಂದಕೂರ