ಕನ್ನಡಪ್ರಭ ವಾರ್ತೆ ಮೈಸೂರು
ಕಲೆಗಳು ವರ್ತಮಾನವನ್ನು ನೋಡುತ್ತಾ ಭವಿಷ್ಯದ ಕಲ್ಪನೆಯನ್ನು ಜನರಿಗೆ ತಲುಪಿಸಬೇಕು ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ತಿಳಿಸಿದರು.ನಗರದ ಶ್ರೀ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ವಿಶ್ವವಿದ್ಯಾನಿಲಯ ಲಲಿತಕಲಾ ಕಾಲೇಜಿನ ಶ್ರೀ ಗುಬ್ಬಿ ವೀರಣ್ಣ ಅಧ್ಯಯನ ಪೀಠವು ಶುಕ್ರವಾರ ಆಯೋಜಿಸಿದ್ದ ಪ್ರದರ್ಶಕ ಕಲೆ ಮತ್ತು ದೃಶ್ಯ ಕಲೆಗಳ ಅನುಸಂಧಾನ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಒಂದು ಕಲೆಯನ್ನು ನೋಡಿದ ಎಲ್ಲರೂ ಚೆನ್ನಾಗಿದೆ ಎಂದರೆ ಅದರಲ್ಲೇನೂ ಸ್ವಲ್ಪ ಹುಳುಕು ಇದೆ ಎಂದುಕೊಳ್ಳಬೇಕು. ಏಕೆಂದರೆ ಕಲೆಯನ್ನು ಒಬ್ಬರೂ ನೋಡುವ ರೀತಿ ಮತ್ತೊಬ್ಬರೂ ನೋಡುವುದಿಲ್ಲ. ಎಲ್ಲರಲ್ಲೂ ವಿಭಿನ್ನ ದೃಷ್ಟಿಕೋನ ಇರುತ್ತದೆ. ಬಹಳ ಹತ್ತಿರಿಂದ ನೋಡಿದರೆ ಒಂದು ರೀತಿ ಕಾಣುತ್ತದೆ. ದೂರಿದಿಂದ ನೋಡಿದರೆ ಮತ್ತೊಂದು ಆಯಾಮ ಕಾಣುತ್ತದೆ. ಆದ್ದರಿಂದ ಕಲೆಯೂ ನೋಡುಗರೆಲ್ಲರೂ ಚಿಂತನಾ ಶಕ್ತಿಯನ್ನು ಬೆಳೆಸುತ್ತದೆ ಎಂದು ಹೇಳಿದರು.ದೇವತೆಗಳಿಗೂ ಜೀವ ಕೊಡುವ ಶಕ್ತಿ ಕಲೆಗಾರನಿಗೆ ಮಾತ್ರ ಇದೆ. ಕಲಾವಿದರು ತೈಲವರ್ಣದಲ್ಲಿ ರಚಿಸಿದಂತಹ ಶಿವ, ಗಣಪತಿ, ಆಂಜನೇಯ, ಲಕ್ಷ್ಮಣ, ಸೀತಾ ಸಮೇತನಾಗಿ ಇರುವ ಶ್ರೀರಾಮನ ಫೋಟೋಗಳು ದೇವರ ಮನೆಯಲ್ಲಿ ಪೂಜಿಸಲ್ಪಡುತ್ತಿವೆ. ಚಿತ್ರಕಲಾವಿದರೂ ಇಲ್ಲದೇ ಹೋಗಿದ್ದರೆ ದೇವರ ರೂಪ ಹೇಗೆ ಇರುತ್ತಿತ್ತು ಎನ್ನುವುದು ಕಲ್ಪನೆಗೆ ಬರುತ್ತಿರಲಿಲ್ಲ ಎಂದರು.
ರಾಜ ರವಿವರ್ಮ ಚಿತ್ರಕಲೆಯನ್ನು ರಚನೆ ಮಾಡಿದ್ದರಿಂದ ರಾಜ ಮನೆತನದವರಲ್ಲದೇ ಬಡವರೂ ಹಲವಾರು ದೇವತೆಗಳು ನೋಡುವಂತೆ ಆಯಿತು. ಜೊತೆಗೆ ಪೂಜಿಸುವುದಕ್ಕೂ ಅವಕಾಶ ಸಿಕ್ಕಿತು. ಏಕೆಂದರೆ ಎಷ್ಟೋ ಕಡೆ ದೇವಾಲಯದೊಳೆಗೆ ಬಡವರನ್ನು ಬಿಡುತ್ತಿರಲಿಲ್ಲ. ಕೇರಳದ ದೇವಾಲಯಗಳಲ್ಲಿ ದೇವರನ್ನು ನೋಡಲು ಬಿಡದೆ ಇದ್ದಾಗ ದೇವಾಲಯದ ಎದುರಿನ ಖಾಲಿ ಗೋಡೆಯ ಮೇಲೆ ಗಣಪತಿಯ ಚಿತ್ರವನ್ನು ಬಿಡಿಸಲಾಯಿತು. ಜನರು ಆ ಗಣಪತಿಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು ಎಂದು ಅವರು ತಿಳಿಸಿದರು.ಪ್ರಕೃತಿಯಲ್ಲಿ ಬದಲಾಗುವ ವಾತಾವರಣಗಳು, ಕ್ಯಾನವಸ್ ಮೇಲೆ ಮೂಡುವ ಒಂದೊಂದು ಗೆರೆಗಳು, ಬಣ್ಣಗಳು ಕೂಡ ನಮ್ಮ ಬದುಕನ್ನು ನಿರೂಪಿಸುತ್ತದೆ. ಕಲೆಗೆ ಶಿಕ್ಷಣ, ಅಕ್ಷರ ಜ್ಞಾನ ಬೇಕಾಗಿಲ್ಲ. ಚಿತ್ರನಟ ಡಾ. ರಾಜ್ ಕುಮಾರ ಅವರಂತೆ ಸ್ವಚ್ಛವಾಗಿ, ಶುದ್ಧವಾಗಿ ಮಾತನಾಡುವವರನ್ನು ನಾವು ಕಂಡೇ ಇಲ್ಲ ಎಂದರು.
ಕಾವಾ ಡೀನ್ ಎ. ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ನಾಗರಾಜ, ವಿವಿ ಲಲಿತಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ. ಅನಿಟ ವಿಮಲಾ ಬ್ರ್ಯಾಗ್ಸ್, ಚಲನಚಿತ್ರ ನಟ ಅರುಣ್ ಸಾಗರ್, ವಿದುಷಿ ಡಾ. ತುಳಸಿ ರಾಮಚಂದ್ರ, ವಿದುಷಿ ಡಾ. ಕರುಣಾ ವಿಜಯೇಂದ್ರ, ಕಾವಾ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಶೈಕ್ಷಣಿಕ ಸಂಯೋಜಕ ಎ.ಪಿ. ಚಂದ್ರಶೇಖರ್, ಶ್ರೀ ಗುಬ್ಬಿ ವೀರಣ್ಣ ಅಧ್ಯಯನ ಪೀಠದ ಸಂಯೋಜಕ ಅರಸೀಕೆರೆ ಯೋಗಾನಂದ ಇದ್ದರು.----
ಕೋಟ್...ರಂಗಭೂಮಿ ಸೇರಿದಂತೆ ಇನ್ನಿತರ ಲಲಿತ ಕಲೆಗಳು ಸೃಜನಶೀಲತೆಯಿಂದ ಕೂಡಿರಬೇಕಾದರೇ ಯಾವಾಗಲೂ ಚಲನಶೀಲತೆಯನ್ನು ಹೊಂದಿರಬೇಕು. ಆಗ ಅವುಗಳಿಗೆ ಚಿರಂತತ್ವ ಬರುತ್ತದೆ.
- ಸಿ. ಬಸವಲಿಂಗಯ್ಯ, ಹಿರಿಯ ರಂಗಕರ್ಮಿ