ಕನ್ನಡಪ್ರಭ ವಾರ್ತೆ ಧಾರವಾಡ
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ರಾಜ್ಯದಲ್ಲಿ ಸ್ಥಾಪನೆಯಾದ ಬಸವೇಶ್ವರ ಪೀಠ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ಈ ಕಾರ್ಯಕ್ರಮ ದಾಸೋಹದ ಪರಿಕಲ್ಪನೆ ಆಧಾರದಲ್ಲಿ ನಡೆಯಲಿದೆ ಎಂದರು.
ಮೇ 13ರಂದು ಬೆಳಗ್ಗೆ 10ಕ್ಕೆ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ರವಿಶಂಕರ ಬೋಪಲಾಪುರ ಉದ್ಘಾಟಿಸುವರು. ಅತಿಥಿಗಳಾಗಿ ಸಾಹಿತಿ ಗೋ.ರು. ಚೆನ್ನಬಸಪ್ಪ, ಡಾ. ನೀರಜ ಪಾಟೀಲ ಆಗಮಿಸುವರು. ನಂತರದಲ್ಲಿ ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಸಂಸ್ಕೃತಿಯ ಪರಿಕಲ್ಪನೆ, ಸಾಂಸ್ಕೃತಿಕ ನಾಯಕನ ಗುಣಲಕ್ಷಣಗಳು, ಬಸವಣ್ಣನವರು ರೂಪಿಸಿದ ಶರಣ ಸಂಸ್ಕೃತಿ, ಬಸವಣ್ಣನವರ ಬಹುಮುಖ ವ್ಯಕ್ತಿತ್ವ, ಬಸವಣ್ಣನವರ ವಚನಗಳಲ್ಲಿ ಮನೋವಿಜ್ಞಾನ, ಸೇರಿ ವಿವಿಧ ವಿಷಯಗಳ ಕುರಿತು ಸುಮಾರು 16 ಜನ ಪಂಡಿತರು ಮಾತನಾಡಲಿದ್ದಾರೆ ಎಂದರು.ಮೇ 14ರಂದು ಮಧ್ಯಾಹ್ನ 3ಕ್ಕೆ ವಿಚಾರ ಸಂಕಿರಣ ಸಮಾರೋಪ ನಡೆಯಲಿದ್ದು, ಡಾ. ವೀರಣ್ಣ ರಾಜೂರ ಸಮಾರೋಪ ನುಡಿಗಳನ್ನಾಡುವರು. ಅತಿಥಿಗಳಾಗಿ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಸಿ. ಕೃಷ್ಣಮೂರ್ತಿ ಆಗಮಿಸಲಿದ್ದಾರೆ. ಕವಿವಿ ಕುಲಸಚಿವ ಡಾ. ಎ.ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಮೇ 15ರಂದು ಬೆಳಗ್ಗೆ 10 ಗಂಟೆಗೆ ಸುವರ್ಣ ಮಹೋತ್ಸವ ಭವನದಲ್ಲಿ ಬಸವ ಜಯಂತಿ ಹಾಗೂ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ನೀಲಕಂಠ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಅರವಿಂದ ಜತ್ತಿ, ಡಾ. ಸಿಎಚ್. ವಿಎಸ್.ವಿ. ಪ್ರಸಾದ ಅತಿಥಿಗಳಾಗಿ ಆಗಮಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಬಸವ ಪೀಠದ ಸಂಯೋಜಕ ಡಾ. ಸಿ.ಎಂ.ಕುಂದಗೋಳ, ಡಾ.ಬಿ.ಎಚ್.ನಾಗೂರ, ಡಾ.ಜೆ.ಎಂ. ಚಂದುನವರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ.ಕಿರಣ ಬನ್ನಿಗೊಳ, ಡಾ.ಪ್ರಭಾಕರ ಕಾಂಬಳೆ ಇದ್ದರು.ಟಾಪ್ ವಿವಿಗಳ ಪಟ್ಟಿಯಲ್ಲಿ ಕವಿವಿ
ಕರ್ನಾಟಕದ ಮೈಸೂರು ವಿವಿ ಸೇರಿ ಇತರ ಅನೇಕ ಖಾಸಗಿ ವಿವಿಗಳನ್ನು ಹಿಂದಿಕ್ಕಿರುವ ಕವಿವಿ ಉತ್ತಮ ರ್‍ಯಾಂಕಿಂಗ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಪ್ರೊ. ಕೆ.ಬಿ. ಗುಡಸಿ ಸಂತಸ ವ್ಯಕ್ತಪಡಿಸಿದರು.