ಸಾಮಾಜಿಕ ಸಮಾನತೆಗೆ ಸಮೀಕ್ಷೆ ಅನಿವಾರ್ಯ

KannadaprabhaNewsNetwork |  
Published : Oct 26, 2025, 02:00 AM IST
3 | Kannada Prabha

ಸಾರಾಂಶ

ಹಿಂದುಳಿದವರಿಗೆ ಹಾಗೂ ದಲಿತರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ಮೀಸಲಾತಿ ಕೊಡಲಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದರಿಂದ ಸಾಮಾಜಿಕ ಸಮಾನತೆಗಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅನಿವಾರ್ಯವಾಗಿದೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹಾಗೂ ದುರ್ಬಲ ಜಾತಿಗಳಿಗೆ ಶಕ್ತಿ ತುಂಬಬೇಕಾದರೆ ಸಮೀಕ್ಷೆ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ, ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ, ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ- 2025- ಚಾರಿತ್ರಿಕ ಹಿನ್ನೆಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ ಕುರಿತು ವಿಚಾರಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದುಳಿದವರಿಗೆ ಹಾಗೂ ದಲಿತರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ಮೀಸಲಾತಿ ಕೊಡಲಾಗುತ್ತದೆ. ಯಾರು ಹಿಂದುಳಿದಿರುತ್ತಾರೋ ಅವರಿಗೆ ಶಕ್ತಿ ತುಂಬಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ನಮ್ಮ ಸಂವಿಧಾನ ಕೂಡ ಹೇಳುತ್ತದೆ ಎಂದರು.

ಸಮೀಕ್ಷೆ ಮಾಡಿ ಯಾರು ದುರ್ಬಲರೆಂದು ಗುರುತಿಸಲು ಡೇಟಾ ಬಹಳ ಮುಖ್ಯ. ಯಾವ ವರ್ಗದವರು ಹಿಂದುಳಿದಿದ್ದಾರೆ, ಅವರ ಸಾಮಾಜಿಕ ಹಾಗೂ ಔದ್ಯೋಗಿಕ ಸ್ಥಿತಿ ಏನು ಎಂದು ತಿಳಿದುಕೊಂಡರೆ ಹಿಂದುಳಿದ ವರ್ಗದವರಿಗೆ ಬಲ ತುಂಬಲು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಎಲ್ಲಾ ಹಿಂದುಳಿದವರು ಒಗ್ಗಟ್ಟಿನಿಂದ ಈ ಜಾತಿ ಸಮೀಕ್ಷೆ ಬೇಕು ಎಂದು ಕೇಳಬೇಕು. ಇದು ನಮ್ಮ ಅನುಕೂಲಕ್ಕಾಗಿ ಸರ್ಕಾರ ಮಾಡುತ್ತಿರುವುದು ಎಂದು ಇತರರಿಗೆ ನೀವು ಅರಿವು ಮೂಡಿಸಬೇಕು. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಜಾತಿ ಸಮೀಕ್ಷೆ ಯಶಸ್ವಿಯಾಗುತ್ತದೆ ಎಂದರು.

ಯಾವ ಜಾತಿಯಲ್ಲಿ ಹುಟ್ಟುತ್ತಾರೋ ಅದೇ ಜಾತಿಯಲ್ಲಿ ಸಾಯುವವರೆಗೂ ಜೀವಿಸಬೇಕಾಗಿದೆ. ಹೀಗಾಗಿ, ಜಾತಿ ಹುಟ್ಟಿನಿಂದಲೇ ನಮ್ಮ ಯೋಗ್ಯತೆ, ಸ್ಥಾನಮಾನ, ಯಾವ ಉದ್ಯೋಗ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಇಂತಹ ಕ್ರೂರವಾದ, ಶೋಷಣೆ ಮಾಡುವ ಜಾತಿ ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಬೇರೆ ಸಮಾಜದಲ್ಲೂ ವರ್ಗಗಳ ಅಸಮಾನತೆ ಇರುತ್ತದೆ. ಶಿಕ್ಷಣ ಪಡೆದು, ಹಣ ಗಳಿಸಿ ಉನ್ನತ ಉದ್ಯೋಗ ಪಡೆದುಕೊಂಡಾಗ ಅವರು ಶ್ರೀಮಂತರಾಗುತ್ತಾರೆ. ಆ ಸಮಾಜದಲ್ಲಿ ವರ್ಗ ತಾರತಮ್ಯ ಹೊರಟು ಹೋಗುತ್ತದೆ ಎಂದು ಅವರು ಹೇಳಿದರು.

ಆದರೆ, ಭಾರತೀಯ ಜಾತಿ ವ್ಯವಸ್ಥೆಯಲ್ಲಿ ದಲಿತರಾಗಿ, ಶೂದ್ರರಾಗಿ ಹುಟ್ಟಿದರೆ ಎಷ್ಟೆ ಶಿಕ್ಷಣ ಪಡೆದರೂ, ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಶೂದ್ರ, ದಲಿತರೇ ಆಗಿರುತ್ತಾರೆ. ಅವರಿಗೆ ಕರೆದು ಜನಿವಾರ ಹಾಕುವುದಿಲ್ಲ ಹಾಗೂ ಸವರ್ಣಿಯರೆಂದೂ ಕರೆಯುವುದಿಲ್ಲ. ಜಾತಿ ವ್ಯವಸ್ಥೆಯೇ ನಮ್ಮ ಸಮಾಜ ಹಿಂದುಳಿಯಲು ಕಾರಣ. ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ಶೂದ್ರರಿಗೆ ಹಾಗೂ ದಲಿತರಿಗೆ ವಿದ್ಯೆ, ಅಧಿಕಾರ, ಆಸ್ತಿಯಿಂದ ವಂಚಿಸಲಾಗುತ್ತಿದೆ. ಬಹುಸಂಖ್ಯಾತ ಜನರು ಹಿಂದುಳಿದಿದ್ದರಿಂದ ಈ ಸಮಾಜ ಹಾಗೂ ಭಾರತ ಮುಂದುವರೆಯಲು ಸಾಧ್ಯವಾಗಿಲ್ಲ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ಮಾತ್ರ ಹಿಂದುಳಿದವರು ವಿದ್ಯೆ, ಉದ್ಯೋಗವನ್ನು ಮೀಸಲಾತಿ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಸಂವಿಧಾನದಿಂದ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿದೆ. ರಾಜಕೀಯದಲ್ಲಿ ಮೀಸಲಾತಿ ಇರುವುದರಿಂದ ದಲಿತರು, ಶೂದ್ರರು, ಹಿಂದುಳಿದವರು ಕಾಣಿಸಿಕೊಳ್ಳುತ್ತಾರೆ. ಆದರೆ, ಸಮಾಜವನ್ನು ನಿಯಂತ್ರಿಸುವ ಆಯಾಕಟ್ಟಿನ ಅಧಿಕಾರ ಸ್ಥಾನದಲ್ಲಿ ಮೊದಲು ಕಾಣಿಸಿಕೊಳ್ಳುವುದೇ ಕೆಲವೇ ಸಮುದಾಯದವರು ಮಾತ್ರ ಎಂದು ಅವರು ತಿಳಿಸಿದರು.

ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಜಿ.ಕೆ. ಮೋಹನ್ ಪ್ರಸ್ತಾವನೆ ಮಂಡಿಸಸಿದರು. ಜಾಗೃತ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ವಿ. ವಾಸು ಮುಖ್ಯ ಭಾಷಣ ಮಾಡಿದರು.

ಶಾಸಕ ಡಿ. ರವಿಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಿವೃತ್ತ ಡಿವೈಎಸ್ಪಿ ಸುಹೇಲ್ ಅಹ್ಮದ್, ಹೋರಾಟಗಾರ್ತಿ ಸವಿತಾ ಪ. ಮಲ್ಲೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ದಮನಿತ ಸಮಾಜಗಳ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಂ. ಗಾಡ್ಕರ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ವಕೀಲ ರಮೇಶ್‌ ಗೌಡ ಮೊದಲಾದವರು ಇದ್ದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಸ್ವಾಗತಿಸಿದರು.

----

ಬಾಕ್ಸ್...

ಯಾವುದೇ ಸಮುದಾಯ ತುಳಿಯಲು ಸಮೀಕ್ಷೆ ಮಾಡುತ್ತಿಲ್ಲ- ಸ್ಪಷ್ಟನೆ

ಜಾತಿ ಸಮೀಕ್ಷೆಗೆ ಮುಂದಾದಾಲೆಲ್ಲಾ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಜಾತಿ ಸಮೀಕ್ಷೆಯಿಂದ ಮುಂದುವರಿದಿರುವ ಜಾತಿಗಳನ್ನು ತಿಳಿಯಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಯಾವುದೇ ಸಮುದಾಯಗಳನ್ನು ತುಳಿಯಲು ಸಮೀಕ್ಷೆ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ಕೂಡ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದಿರುವುದು ಸರಿಯಲ್ಲ. ಈ ಮೂಲಕ ಮುಂದುವರಿದ ಸಮುದಾಯದವರು ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರೆಲ್ಲ ಎಲ್ಲವನ್ನೂ ಅನುಭವಿಸಿರುವವರು. ತಮ್ಮ ಹಕ್ಕುಗಳು ಮೊಟಕಾಗುತ್ತವೆ ಎಂದು ಅನುಕೂಲ ಪಡೆದುಕೊಂಡಿರುವವರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ, ಜಾತಿ ಸಮೀಕ್ಷೆ ಪರವಾಗಿ ಹಿಂದುಳಿದ ವರ್ಗಗಳು ಧ್ವನಿ ಎತ್ತಬೇಕು. ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಹೋರಾಟ ನಡೆಸುವ ಮೂಲಕ ಉತ್ತರ ನೀಡಬೇಕು. ಜಾತಿ ಸಮೀಕ್ಷೆಗೆ ಎಲ್ಲರೂ ಕೈಜೋಡಿಸಬೇಕು.

----

ಕೋಟ್...

ಜಾತಿ ವ್ಯವಸ್ಥೆ ಹೋಗಲಾಡಿಸಲು ಮೀಸಲಾತಿ, ಉದ್ಯೋಗ ಹಾಗೂ ಶಿಕ್ಷಣ ನೀಡಲು ಅವಕಾಶ ಮಾಡಿಕೊಟ್ಟರು. ಜಾತಿ ವ್ಯವಸ್ಥೆ ಹೋಗಲಾಡಿಸಲು ಇಷ್ಟು ಮಾಡಿದರೆ ಸಾಲದು, ಅಂತರ್ಜಾತಿ ವಿವಾಹ ಮಾಡಬೇಕು, ಧರ್ಮ ಸುಧಾರಣೆ ಮಾಡಬೇಕು.

- ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ

----

ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕಾದರೆ ಹಾಗೂ ಸಂವಿಧಾನ ಜಾರಿಯಾಗಬೇಕಾದರೆ ಈ ಸಮೀಕ್ಷೆ ನಡೆಯಬೇಕು. ಸಮೀಕ್ಷೆಯಲ್ಲಿ ಅಲ್ಪ ಸ್ವಲ್ಪ ದೋಷವಿದ್ದರೆ ತಿದ್ದಿಕೊಳ್ಳಬಹುದು. ಅದನ್ನು ಬಿಟ್ಟು ನಾನು ಲೆಕ್ಕ ಕೊಡಲ್ಲ, ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಎಂದು ಹೇಳಬಾರದು. ಸಮೀಕ್ಷೆ ವಿರೋಧಿಸುವವರನ್ನು ಎಲ್ಲರೂ ವಿರೋಧಿಸಬೇಕು.

- ಡಾ.ಎಚ್.ಪಿ. ವಾಸು, ಕಾರ್ಯಕಾರಿ ಸಮಿತಿ ಸದಸ್ಯ, ಜಾಗೃತ ಕರ್ನಾಟಕ

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ