ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ: ಬಿ.ಡಿ. ಸಾವಕ್ಕನವರ ಮಾಹಿತಿ
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಕುರಿತು, ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸೆ.26ರಂದು ಬೆಳಗ್ಗೆ 10ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಬಿ.ಡಿ. ಸಾವಕ್ಕನವರ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಸಾವಿರಾರು ವರ್ಷಗಳಿಂದ ಶೋಷಣೆ, ದೌರ್ಜನ್ಯ, ಹಿಂಸೆ, ಸಾಮಾಜಿಕ ಬಹಿಷ್ಕಾರಗಳನ್ನು ಅನುಭವಿಸುತ್ತಲೇ ಬಂದಿರುವ ಪರಿಶಿಷ್ಟ ಜಾತಿಗಳು ಶೇ.15ರಷ್ಟು ಮೀಸಲಾತಿಯನ್ನು ಉಳಿದ ಸಮುದಾಯಗಳ ಜೊತೆ ಹಂಚಿಕೊಳ್ಳುತ್ತಿದೆ. ಆದರೆ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಅಸ್ಪೃಶ್ಯರಲ್ಲದ ಸಮುದಾಯಗಳು ಸೇರಿ ಒಟ್ಟಾರೆ 101 ಜಾತಿಗಳಿವೆ. ಇದರೊಳಗೆ ಬಲಾಢ್ಯ ಸಮುದಾಯಗಳೇ ಹೆಚ್ಚು ಮೀಸಲಾತಿ ಪಡೆದುಕೊಂಡಿವೆ ಎಂದರು.ಅಸ್ಪೃಶ್ಯ ಸಮುದಾಯಗಳಾದ ಹೊಲೆಯರು, ಮಾದಿಗರು ಮತ್ತು ಅವರ ಸಂಬಂಧಿತ ಜಾತಿಗಳು ಮೀಸಲಾತಿ ಪಡೆಯುವಲ್ಲಿ ವಂಚಿತವಾಗಿದ್ದವು. ಇದರ ವಿರುದ್ಧ ಸುಮಾರು 35 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದರ ಪರಿಣಾಮವಾಗಿ ಸದಾಶಿವ ಆಯೋಗ ರಚನೆಯಾಯಿತು. ಅದು ವರದಿಯನ್ನೂ ನೀಡಿತು. ಆದರೆ ಸರ್ಕಾರಗಳು ಆ ವರದಿಯನ್ನ ಜಾರಿಗೆ ತರಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಹೋಗಲಾಯಿತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎಲ್ಲಾ ಜಾತಿಗಳ ನಡುವೆ ಸಮಾನತೆ ಸಾಧಿಸಬೇಕಾಗಿರುವುದರಿಂದ ಮೀಸಲಾತಿ ವರ್ಗೀಕರಣ ಮಾಡಬಹುದಾಗಿದೆ. ಈ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ತೀರ್ಪು ನೀಡುವ ಮೂಲಕ ಸದಾಶಿವ ಆಯೋಗದ ವರದಿ ಎತ್ತಿ ಹಿಡಿದಿದೆ ಎಂದು ತಿಳಿಸದರು.
ಪತ್ರಕರ್ತ ಎನ್.ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಒಳ ಮೀಸಲಾತಿಯನ್ನು ನೀಡಬೇಕು. ಸುಪ್ರೀಂ ಕೋರ್ಟ್ ನಮ್ಮ ಹೋರಾಟಕ್ಕೆ ತಾತ್ವಿಕ ಅಂತ್ಯ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಎ.ಅಣ್ಣಪ್ಪ, ಕೆ.ಎನ್.ಅಶೋಕ್ ಕುಮಾರ್, ಕೆ. ಚಾವಡೆ ಲೋಕೇಶ್, ಎ.ಡಿ. ಆನಂದಪ್ಪ, ಮೂರ್ತಿ ಉಪಸ್ಥಿತರಿದ್ದರು.