ಯಕ್ಷಗಾನದ ಪರಿಶುದ್ಧತೆ ಕಾಪಾಡಿದ ಹಿರಿಯ ಕಲಾವಿದರು: ಆರ್‌.ಟಿ. ಭಟ್ಟ ಕಬ್ಗಾಲ

KannadaprabhaNewsNetwork |  
Published : Mar 28, 2026, 02:15 AM IST
ಫೋಟೋ : ೨೭ಕೆಎಂಟಿ_ಎಂಎಆರ್_ಕೆಪಿ೧ : ಕಬ್ಗಾಲದಲ್ಲಿ ಸಂಸ್ಮರಣೆ ಹಾಗೂ ತಾಳಮದ್ದಲೆ  | Kannada Prabha

ಸಾರಾಂಶ

ಕುಮಟಾ ತಾಲೂಕಿನ ಕಬ್ಗಾಲದಲ್ಲಿ ಬ್ರಹ್ಮೂರಿನ ಮಹಾಗಣಪತಿ ಯಕ್ಷಗಾನ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಸಂಯೋಜನೆಯಲ್ಲಿ ಸ್ಥಳೀಯ ನರಸಿಂಹ ಹೆಗಡೆ ಮನೆಯಲ್ಲಿ ನಾರಾಯಣ ಹೆಗಡೆ ಹುಳಸೆ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಕುಮಟಾ: ಯಕ್ಷಗಾನದ ಕಲಾತ್ಮಕ ಮೌಲ್ಯದ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬರುವಲ್ಲಿ ಹಿರಿಯ ಕಲಾವಿದರ ಕೊಡುಗೆ ಅಪಾರವಿದೆ. ಅವರು ಹಾಕಿಕೊಟ್ಟ ಮಾರ್ಗ ಸದಾ ಅನುಸರಣೀಯ ಎಂದು ಯಕ್ಷಗಾನದ ಹಿರಿಯ ಕಲಾವಿದ ಆರ್.ಟಿ. ಭಟ್ಟ ಕಬ್ಗಾಲ ಹೇಳಿದರು.

ಕಬ್ಗಾಲದಲ್ಲಿ ಬ್ರಹ್ಮೂರಿನ ಮಹಾಗಣಪತಿ ಯಕ್ಷಗಾನ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಸಂಯೋಜನೆಯಲ್ಲಿ ಸ್ಥಳೀಯ ನರಸಿಂಹ ಹೆಗಡೆ ಮನೆಯಲ್ಲಿ ಆಯೋಜಿಸಿದ್ದ ನಾರಾಯಣ ಹೆಗಡೆ ಹುಳಸೆ ಸಂಸ್ಮರಣಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ನಾರಾಯಣ ಹೆಗಡೆ ಆದರ್ಶ ಕಲಾವಿದರಾಗಿದ್ದರು. ಅವರು ವಾಲಿ, ಜಾಂಬವಂತ, ದಶರಥ, ರಾಮ, ದೂರ್ವಾಸ, ಭೀಷ್ಮ ಮುಂತಾದ ಪಾತ್ರಗಳಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಆಟ ಮತ್ತು ತಾಳಮದ್ದಲೆ ಎರಡರಲ್ಲೂ ಸೈ ಎನಿಸಿಕೊಂಡು ರಂಗದಲ್ಲಿ ಔಚಿತ್ಯ ಮೀರದ ನಿಷ್ಠುರವಾದಿಗಳಾಗಿದ್ದರು ಎಂದರು.

ಅತಿಥಿ ಎಂ.ಜಿ. ಭಟ್ಟ ಬೆಂಗಳೂರು ಮಾತನಾಡಿ, ಹಿರಿಯರ ಸಂಸ್ಮರಣೆಯಿಂದ ಕಿರಿಯರು ಏಳಿಗೆ ಹೊಂದುತ್ತಾರೆ. ಬಂಧು-ಬಾಂಧವರ ಕೂಡುವಿಕೆಯಲ್ಲಿ ನಡೆದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ವಿದ್ವಾನ್ ವಿಶ್ವನಾಥ ಭಟ್ಟ ಬಾಸಲ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ನರಸಿಂಹ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ ವಂದಿಸಿದರು.

ಬಳಿಕ ಅತಿಥಿ ಕಲಾವಿದರಿಂದ ಅಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀದೇವಿ ಮಹಾತ್ಮೆಯ ''''''''ಕದಂಬ ಕೌಶಿಕೆ'''''''' ತಾಳಮದ್ದಲೆ ಜರುಗಿತು. ಭಾಗವತರಾಗಿ ಶಂಕರ್ ಭಟ್ ಬ್ರಹ್ಮೂರು, ಮದ್ದಲೆಯಲ್ಲಿ ಸುಬ್ರಾಯ ಭಟ್ಟ ಬ್ರಹ್ಮೂರು ಹಾಗೂ ನರಸಿಂಹ ಹೆಗಡೆ ಮೂರೂರು, ಚಂಡೆಯಲ್ಲಿ ಗಜಾನನ ಹೆಗಡೆ ಸಾಂತೂರು ಮತ್ತು ಗಣೇಶ ಹಿಮ್ಮೇಳದಲ್ಲಿ ಕಾರ್ಯನಿರ್ವಹಿಸಿದರು. ಮುಮ್ಮೇಳದಲ್ಲಿ ಶ್ರೀದೇವಿಯಾಗಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಶುಂಭನಾಗಿ ಆರ್.ಟಿ. ಭಟ್ ಕಬ್ಗಾಲ, ರಕ್ತಬೀಜನಾಗಿ ನಾರಾಯಣ ಭಟ್ ಬ್ರಹ್ಮೂರು, ಚಂಡ-ಮುಂಡರಾಗಿ ವಿ.ಟಿ. ಭಟ್ ಮತ್ತು ನರಸಿಂಹ ಹೆಗಡೆ ಕಬ್ಗಾಲ, ಸುಗ್ರೀವನಾಗಿ ನಾಗರಾಜ ಶಾಸ್ತ್ರಿ ಹೊಸಾಕುಳಿ, ದೇವೇಂದ್ರನಾಗಿ ಗಣಪತಿ ಭಟ್ ಬ್ರಹ್ಮೂರು ಅರ್ಥಧಾರಿಕೆಯೊಂದಿಗೆ ಪಾತ್ರ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ರಕ್ಷಣೆ ಜನಾಂದೋಲನದಲ್ಲಿ ಭಾಗವಹಿಸಲು ಕರೆ
ಮೀಸಲಾತಿ ಕಸಿದುಕೊಳ್ಳುವ ಹುನ್ನಾರಕ್ಕೆ ಹೋರಾಟವೇ ಅಸ್ತ್ರ