ಹಿರಿಯ ನಾಗರಿಕರು ಆರೋಗ್ಯ ಬಹು ಆಯಾಮದ ವಿಷಯ: ಡಾ.ಪಿ.ವಿ.ಭಂಡಾರಿ

KannadaprabhaNewsNetwork | Published : Mar 21, 2025 12:33 AM

ಸಾರಾಂಶ

ಭಾರತೀಯ ವಿಕಾಸ್ ಟ್ರಸ್ಟ್ ವತಿಯಿಂದ ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರಾಯೋಜಕತ್ವದಲ್ಲಿ ಹಿರಿಯ ನಾಗರಿಕರ ಸಂವಾದ, ಆರೋಗ್ಯ ಮಾಹಿತಿ ಮತ್ತು ವಿವಿಧ ಚಟುವಟಕೆಗಳನ್ನು ಒಳಗೊಂಡ ಮೂರು ದಿನಗಳ ಕಾರ್ಯಕ್ರಮ ‘೬೦ರ ನಂತರ ಮರಳಿ ಅರಳಿ’ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಭಾರತೀಯ ವಿಕಾಸ್ ಟ್ರಸ್ಟ್ ವತಿಯಿಂದ ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರಾಯೋಜಕತ್ವದಲ್ಲಿ ಹಿರಿಯ ನಾಗರಿಕರ ಸಂವಾದ, ಆರೋಗ್ಯ ಮಾಹಿತಿ ಮತ್ತು ವಿವಿಧ ಚಟುವಟಕೆಗಳನ್ನು ಒಳಗೊಂಡ ಮೂರು ದಿನಗಳ ಕಾರ್ಯಕ್ರಮ ‘೬೦ರ ನಂತರ ಮರಳಿ ಅರಳಿ’ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಶಿಬಿರ ಉದ್ಘಾಟಿಸಿದ ಉಡುಪಿಯ ಖ್ಯಾತ ಮನೋವೈದ್ಯ, ಡಾ ಏ ವಿ ಬಾಳಿಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪಿ.ವಿ ಭಂಡಾರಿ, ಹಿರಿಯ ನಾಗರಿಕರ ಆರೋಗ್ಯ ಎಂಬುದು ಬಹು ಆಯಾಮದ ವಿಷಯವಾಗಿದ್ದು ಉತ್ತಮ ಆಹಾರ, ಸೂಕ್ತ ವೈದ್ಯಕೀಯ ಸಲಹೆ, ಮನೆ ಮಂದಿಯೊಂದಿಗೆ ಸಹಬಾಳ್ವೆ, ವ್ಯಾಯಾಮ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದರು.ಹಿರಿಯರಲ್ಲಿ ಕಂಡು ಬರುವ ಡಿಮೆನ್ಶಿಯಾ ಅಥವಾ ಮರೆವಿನ ಕಾಯಿಲೆಯ ಹೆಚ್ಚಳ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕಡೆಗೆ ಬೊಟ್ಟು ಮಾಡುತ್ತಿದೆ. ಹಿರಿಯರಿಗಾಗಿ ನಡೆಸುತ್ತಿರುವ ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕು. ಇದರಿಂದಾಗಿ ಹಿರಿಯರ ಸ್ವಾಸ್ಥ್ಯ ಸುಧಾರಣೆಯಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಹಉಪಾಧ್ಯಕ್ಷ ಕೆ.ನಂದ ಕಿಶೋರ್, ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು. ಬಿವಿಟಿಯ ಆಡಳಿತ ವಿಶ್ವಸ್ಥ ವಿನುತಾ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ವ್ಯವಸ್ಥಾಪಕ ಮನೋಹರ ಕಟಗೇರಿ ವಂದಿಸಿದರು. ಕಾರ್ಯಕ್ರಮ ಅಧಿಕಾರಿ ರಾಘವೇಂದ್ರ ಆಚಾರ್ಯ ನಿರೂಪಿಸಿದರು.

ಮೂರು ದಿನಗಳ ಮಾಹಿತಿ, ಸಂವಾದ ಕಾರ್ಯಕ್ರಮದಲ್ಲಿ ಡಾ. ವಿರೂಪಾಕ್ಷ ದೇವರಮನೆ, ನಾಡೋಜ ಕೆ. ಪಿ. ರಾವ್, ಡಾ. ಸೆಬ್ಸ್ಟಿನಾ ಅನಿತಾ ಡಿ’ಸೋಜಾ, ನಿರಂಜನ್ ಭಟ್, ಪ್ರೊ. ಜೈಕಿಶನ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಭಾಗವಹಿಸಿದ ಹಿರಿಯ ನಾಗರಿಕರು ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಉಡುಪಿ ಪರಿಸರದ ೫೦ ಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿದರು.

Share this article