ಕುವೆಂಪು ನಗರದಲ್ಲಿ ಮಲ-ಮೂತ್ರಾದಿಗಳ ಹೊಳೆ!

KannadaprabhaNewsNetwork | Published : Aug 8, 2024 1:34 AM

ಸಾರಾಂಶ

ಆರ್ಥಿಕವಾಗಿ ಹಿಂದುಳಿದವರ ಮನೆಗಳೇ ಇರುವ ಈ ಭಾಗದಲ್ಲಿ ಇರುವ ನಾಗರಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪಾಲಿಕೆಗಿರಬೇಡವೇ?

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಡೆಂಘೀ ತಾಂಡವವಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಪಾಲಿಕೆ ಹಾಗೂ ಜಿಲ್ಲಾಡಳಿತ ಡಂಗೂರ ಸಾರುತ್ತಿದೆ.

ವಿಪರ್ಯಾಸವೆಂದರೆ ಮೈಸೂರಿನ ಕುವೆಂಪು ನಗರ ಕೆ ಎಚ್ ಬಿ ಎರಡನೇ ಹಂತದ ಇ.ಡಬ್ಲ್ಯೂ.ಎಸ್. ಮನೆ ಸಂಖ್ಯೆ 202 ರ ಬಳಿ ನೀರು ಹರಿಯುವ ಜಾಗದಲ್ಲಿ ಒಳಚರಂಡಿಯ ಮಲ-ಮೂತ್ರಾದಿಗಳ ಹೊಳೆ ಹರಿಯುತ್ತಿದೆ. ಈ ಭಾಗದಲ್ಲಿ ವಾಸವಿರುವ ಹಿರಿಯ ನಾಗರೀಕರಿಗೆ ಶೌಚಾಲಯದೊಳಗೆ ವಾಸಿಸುತ್ತಿದ್ದೇವೆಯೋ ಎಂದು ಭಾಸವಾಗುತ್ತಿದೆ.

ಈ ಭಾಗದ ನಾಗರಿಕರು ಪ್ರತಿದಿನ ಹೊಲಸು ವಾಸನೆಯನ್ನೇ ಉಸಿರಾಡುತ್ತಿದ್ದಾರೆ. ಮೂರು ತಿಂಗಳಿನಿಂದ ಮನೆಯ ಬಳಿ ಮಲ-ಮೂತ್ರಾದಿಗಳ ಹೊಳೆ ಹರಿಯುತ್ತಿದ್ದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ.

ಪಾಲಿಕೆ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲ ಮೂತ್ರಾದಿಗಳ ದರ್ಶನ ಪಡೆದು ಮೂಗು ಮುಚ್ಚಿಕೊಂಡು ತೆಪ್ಪಗೆ ಅಲ್ಲಿಂದ ತೆರಳಿದ್ದಾರೆಯೇ ಹೊರತು ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ.

ಡೆಂಘೀ ವಿಚಾರದಲ್ಲಿ ಎಚ್ಚರ ವಹಿಸುವಂತೆ ಕಾಟಾಚಾರಕ್ಕೆ ಢಂಗೂರ ಸಾರುವ ಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ಕುವೆಂಪು ನಗರದಲ್ಲಿ ಹರಿಯುತ್ತಿರುವ ಮಲಮೂತ್ರಾದಿಗಳ ಹೊಳೆಯ ವಾಸನೆಯು ಮೂಗಿಗೆ ಬಡಿಯುತ್ತಿಲ್ಲವೇ.

ಆರ್ಥಿಕವಾಗಿ ಹಿಂದುಳಿದವರ ಮನೆಗಳೇ ಇರುವ ಈ ಭಾಗದಲ್ಲಿ ಇರುವ ನಾಗರಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪಾಲಿಕೆಗಿರಬೇಡವೇ?

ಈ ಭಾಗದ ಸುತ್ತಮುತ್ತ ಇರುವ ಗಲ್ಲಿ ಗಲ್ಲಿಗಳಲ್ಲಿ ಪಾಲಿಕೆ ಸದಸ್ಯರು ಹಾಗೂ ಶಾಸಕರ ಹೆಸರುಗಳುಳ್ಳ ಫಲಕಗಳ ಗೂಟಗಳು ರಾರಾಜಿಸುತ್ತಿರುತ್ತವೆ. ಈ ಫಲಕಗಳಲ್ಲಿ ಜನಪ್ರತಿನಿಧಿಗಳ ದೂರವಾಣಿ ಸಂಖ್ಯೆಯನ್ನಾದರೂ ನಮೂದಿಸಿದ್ದರೆ ಜನ ಸಾಮಾನ್ಯರು ತಮ್ಮ ಕಷ್ಟಗಳನ್ನು ತೋಡಿಕೊಳ್ಳಬಹುದು.

------

ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಈ ಮಲ ಮೂತ್ರಾದಿಗಳ ಹೊಳೆಗೆ ಮುಕ್ತಿ ನೀಡಿ ಈ ಭಾಗದ ನಾಗರೀಕರಿಗೆ ಹೊಲಸು ವಾಸನೆಯಿಂದ ಮುಕ್ತರಾಗುವಂತೆ ಮಾಡಲಿ. ಆರೋಗ್ಯ ಇಲಾಖೆಯು ಜನರ ಆರೋಗ್ಯ ಕಾಪಾಡುವತ್ತ ಗಮನ ಹರಿಸಲಿ.

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.

Share this article