ಕನ್ನಡಪ್ರಭ ವಾರ್ತೆ ಮಂಗಳೂರು
ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿ (61) ಅಲ್ಪಕಾಲದ ಅಸೌಖ್ಯದಿಂದ ಬಾಳೇಪುಣಿಯಲ್ಲಿರುವ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಅವರು ಸುಮಾರು 39 ವರ್ಷಗಳ ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸಿದವರು. ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ತಮ್ಮ ವರದಿ ಮೂಲಕ ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಇವರದ್ದು. 27 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ, 2021ರಿಂದ ವಿಶೇಷ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿದ್ದರು.1963ರ ಜೂ.1ರಂದು ಜನಿಸಿದ ಅವರು, ಅಮೃತ, ಚೇತನಾ, ದಿ ಗೋಲ್ಡ್, ಸಪ್ತಸಾರ ವಾರಪತ್ರಿಕೆಗಳು, ಕೆನರಾ ಟೈಮ್ಸ್ ಬಳಗದ ಪತ್ರಿಕೆಗಳು, ಮಂಗಳೂರು ಮಿತ್ರ, ಸಂಯುಕ್ತ ಕರ್ನಾಟಕ, ಹೊಸ ದಿಗಂತ ಪತ್ರಿಕೆಗಳಲ್ಲಿ ವರದಿಗಾರರಾಗಿದ್ದರು.ಅಕ್ಷರ ಸಂತ ಹರೇಕಳ ಹಾಜಬ್ಬರ ಕುರಿತಾಗಿ 2004ರಲ್ಲಿ ‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು’ ವಿಶೇಷ ವರದಿಯ ಮೂಲಕ ಮೊತ್ತ ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ್ದರು. ಇದರ ಬಳಿಕ ದೇಶ- ವಿದೇಶಗಳಿಂದ ನೆರವು ಹರಿದು ಹಾಜಬ್ಬರ ಕನಸಿನ ಶಾಲೆಯು ಕಾಲೇಜು ಹಂತದವರೆಗೆ ಸಾಗಿದೆ. ಈ ನಡುವೆ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಗೂ ಬಾಜನರಾದರು. ಇದೇ ರೀತಿ ಮುಂಗುಲಿ ಕೊರಗರಂಥ ಗ್ರಾಮೀಣ ಎಲೆಮರೆಯ ಅಸಂಖ್ಯ ಪ್ರತಿಭೆಗಳನ್ನು, ಅವರ ಯಶೋಗಾಥೆಗಳನ್ನು ಬಾಳೇಪುಣಿ ತಮ್ಮ ವರದಿಗಳ ಮೂಲಕ ಬೆಳಕಿಗೆ ತಂದಿದ್ದಾರೆ.
ಅತ್ಯುತ್ತಮ ಗ್ರಾಮೀಣ ವರದಿಗಾಗಿ 2004ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ಜಾಗತಿಕ ಸಮಾಜ ಕಾರ್ಯ ಸಂಸ್ಥೆ ‘ಹಂಗರ್ ಪ್ರಾಜೆಕ್ಟ್’ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುವ ‘ಮಹಿಳೆ ಮತ್ತು ಪಂಚಾಯತ್ ರಾಜ್’ ವಿಷಯಾಧಾರಿತ ವರದಿಗಾರಿಕೆ ಸ್ಪರ್ಧೆಯಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ‘ಸರೋಜಿನಿ ನಾಯ್ಡು ಪ್ರಶಸ್ತಿ’ ತಂದು ಕೊಟ್ಟ ಏಕೈಕ ಪತ್ರಕರ್ತ. ಪತ್ರಿಕೋದ್ಯಮ ಸೇವೆಗಾಗಿ 2012ರಲ್ಲಿ ಕಾಂತಾವರ ಕನ್ನಡ ಸಂಘದಿಂದ ‘ಕಾಂತಾವರ ಪುರಸ್ಕಾರ’, 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದಿಂದ 2021ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಬಾಳೇಪುಣಿ ಅವರಿಗೆ ಸಂದಿವೆ.2021-22ನೇ ಸಾಲಿನಿಂದ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಸಲಹಾ ಸಮಿತಿಗೆ ವಿಶೇಷ ಆಹ್ವಾನಿತರಾಗಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಬಾಳೇಪುಣಿ ಅವರ ನಿಧನಕ್ಕೆ ನಾಡಿನೆಲ್ಲೆಡೆಯ ಗಣ್ಯರು ಸಂತಾಪ ಸೂಚಿಸಿದ್ದಾರೆ.