ಕುವೆಂಪು ಸಾಂಸ್ಕೃತಿಕ ನಾಯಕ, ಸಿ. ಅಶ್ವತ್ಥ್‌ ಸಾಂಸ್ಕೃತಿಕ ಗಾಯಕ

KannadaprabhaNewsNetwork | Published : Dec 29, 2024 1:16 AM

ಸಾರಾಂಶ

ಕುವೆಂಪು ಅವರು ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶ ಪ್ರಚಾರದ ವ್ರತ ಕೈಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರುಬಸವಣ್ಣನವರ ನಂತರ ಕುವೆಂಪು ಅವರು ಸಾಂಸ್ಕೃತಿಕ ನಾಯಕರಾದರೆ ಸಿ. ಅಶ್ವತ್ಥ್‌ಸಾಂಸ್ಕೃತಿಕ ಗಾಯಕ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ಬಣ್ಣಿಸಿದರು.ನಗರದ ಜೆಎಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ರಾಷ್ಟ್ರಕವಿ ಕುವೆಂಪು, ಖ್ಯಾತ ಗಾಯಕ ಸಿ. ಅಶ್ವತ್ಥ್‌ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಶನಿವಾರ ಏರ್ಪಡಿಸಿದ್ದ ಗೀತನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುವೆಂಪು ಅವರನ್ನು ಶಕಪುರುಷ, ಸಾಂಸ್ಕೃತಿಕ ಪುರುಷ ಎಂದು ಕೂಡ ಹೇಳಬಹುದು ಎಂದರು.ಕುವೆಂಪು ಅವರು ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶ ಪ್ರಚಾರದ ವ್ರತ ಕೈಗೊಂಡಿದ್ದರು. ಯಾರೇ ಕಾರ್ಯಕ್ರಮಕ್ಕೆ ಕರೆಯಲು ಹೋದರೂ ವಿಶ್ವಮಾನವ ಸಂದೇಶದ ಪ್ರತಿಗಳನ್ನು ಮುದ್ರಿಸಿ, ಹಂಚಿ ಎಂದು ಸಲಹೆ ಮಾಡುತ್ತಿದ್ದರು. ಅಲ್ಲದೇ ತಮ್ಮ ಪಕ್ಕದಲ್ಲಿಯೂ ಪ್ರತಿಗಳನ್ನು ಇಟ್ಟುಕೊಂಡು ಬಂದವರಿಗೆಲ್ಲಾ ಕೊಡುತ್ತಿದ್ದರು ಎಂದು ಅವರು ಸ್ಮರಿಸಿದರು.ಕುವೆಂಪು ಅವರು ಕನ್ನಡದ ಜೊತೆ ಜೊತೆಗೆ ಅದಕ್ಕಿಂತಲೂ ವಿಶ್ವಮಾನವ ಸಂದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಆತ್ಮ, ಆತ್ಮಕಥೆ, ಪಲ್ಲವಿ.. ಎಲ್ಲವೂ ವಿಶ್ವಮಾನವ ಸಂದೇಶವೇ ಆಗಿತ್ತು. ಜಾತಿ, ಮತ ನಿವಾರಣೆಯಾಗದೇ ಸಮಾಜ ಪರಿವರ್ತನೆ ಅಸಾಧ್ಯ ಎಂಬುದು ಅವರ ವಾದವಾಗಿತ್ತು. ಅವರ ಮಾತಿನಲ್ಲಿ ವಿಶ್ವಮಾನವ ಸಂದೇಶ ಸ್ಥಾಯಿಯಾಗಿತ್ತು. ಉಳಿದೆಲ್ಲವೂ ಸಂಚಾರಿಯಾಗಿದ್ದವು ಎಂದರು.ಕುವೆಂಪು ಅವರು ಅನಿಕೇತನ ಕವನ ಬಗ್ಗೆ ಯಾರೋ ಒಬ್ಬರಿಗೆ ಹೇಳಿದಾಗ ಅರ್ಥವಾಗದಂತೆ ನಟಿಸಿದರು. ಆಗ ಕುವೆಂಪು ಅವರು ಜ್ಞಾನಪೂರ್ವ ಮೌಢ್ಯ, ಜ್ಞಾನೋತ್ತರ ಮೌಢ್ಯ- ಎರಡೂ ಅಪಾಯಕಾರಿ ಎಂದು ಪರಿಭಾವಿಸಿದ್ದರು ಎಂದರು.ಮುಖ್ಯ ಅತಿಥಿಯಾಗಿದ್ದ ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ವಿ. ಕವೀಶ್‌ಗೌಡ ಮಾತನಾಡಿ, ಯುವಕರಲ್ಲಿ ಡಿ.ಜೆ. ಪ್ರವೃತ್ತಿ ಹೋಗಬೇಕು. ನಿಜವಾದ ಸಂಗೀತ ಆಲಿಸುವ ಕಡೆ ಗಮನ ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲೂ ಸಂಗೀತ ಕೇಳಿಸುವ ಕೆಲಸ ಆಗಬೇಕು ಎಂದರು.ಮತ್ತೊರ್ವ ಮುಖ್ಯಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಮಾತನಾಡಿ, ಕುವೆಂಪು ಎಲ್ಲದರೂ ಇರು, ಎಂಥಾದರೂ ಇರು, ಎಂದೆಂದಿಗೂ ಕನ್ನಡವಾಗಿರು ಎಂದು ಹೇಳಿದರೆ, ಸಿ. ಅಶ್ವತ್ಥ್‌ಅವರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಜೀವಿತದ ಕೊನೆಯವರೆಗೂ ಹಾಡಿದರು ಎಂದರು.ಸುಗಮ ಸಂಗೀತ ಪರಿಷತ್‌ಜಿಲ್ಲಾಧ್ಯಕ್ಷ ನಾಗರಾಜ ವಿ. ಭೈರಿ ಮಾತನಾಡಿ, ಕಳೆದ ಮೂರು ದಿನಗಳಿಂದ ಸರಣಿ ರೂಪದಲ್ಲಿ ನಡೆಸಿದ ಕಾರ್ಯಕ್ರಮಗಳಿಗೆ ಸಂಗೀತಪ್ರಿಯರು ತೋರಿಸಿದ ಪ್ರೀತಿಗೆ ಹೃದಯತುಂಬಿ ಬಂದಿದೆ. ಮತ್ತಷ್ಟು ಕಾರ್ಯಕ್ರಮ ರೂಪಿಸಲು ಸ್ಫೂರ್ತಿ ನೀಡಿದೆ ಎಂದರು.ಸಂಸ್ಥೆಯು ತರಬೇತಿ ನೀಡುವ ಮೂಲಕ ಹವ್ಯಾಸಿ ಗಾಯಕರಿಗೆ, ವೃತ್ತಿಪರ ಗಾಯಕರಿಗೆ, ವಾದ್ಯದವರಿಗೆ ವೇದಿಕೆ ಒದಗಿಸಿಕೊಟ್ಟಿದೆ ಎಂದು ಅವರು ಹೇಳಿದರು.ಡಾ.ಎ.ಡಿ. ಶ್ರೀನಿವಾಸನ್, ಎನ್‌. ಬೆಟ್ಟೇಗೌಡ, ಜಿ. ಶ್ರೀಧರ್‌, ರಾಜೇಶ್‌ಪಡಿಯಾರ್‌, ಡಾ.ವೈ.ಡಿ. ರಾಜಣ್ಣ, ಹಂಸಿನಿ. ನಾಗಲಕ್ಷ್ಮಿ, ಡೇವಿಡ್‌ಹಾಡಿದರು. ಅದರಲ್ಲೂ ಕೆಲವು ಭಾವಗೀತೆಗಳಿಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ಕಂಡು ಬಂದಿತು.

Share this article