ಹಿರಿಯ ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್ ಗೆ ಐದನಿ ಚಿನ್ನದ ಪದಕ, ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 16, 2025, 02:15 AM IST
ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ 'ಐದನಿ ಚಿನ್ನದ ಪದಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಪ್ರೊ.ರವಿ‌ ಕೋರಿಶೆಟ್ಟರ್ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮಹಾನ್ ಸಂಶೋಧಕರು.

ಬಳ್ಳಾರಿ: ಪ್ರೊ.ರವಿ‌ ಕೋರಿಶೆಟ್ಟರ್ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮಹಾನ್ ಸಂಶೋಧಕರು. ಅಂತಹ ಸಂಶೋಧಕರು‌ ಅಂತಾರಾಷ್ಟ್ರೀಯ ಮಟ್ಟದ ಟೋನಿ ಜೋಸೆಫ್ ಅವರ ಅರ್ಲಿ ಹ್ಯುಮನ್ಸ್ ಸಂಶೋಧನಾ ಕೃತಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಾಗೈತಿಹಾಸಿಕ ಸಂಶೋಧನೆ ಮೂಲಕ ನಮ್ಮ ಮುಂದೆ ಹೊಸ ಪ್ರಪಂಚವನ್ನು ಸೃಷ್ಟಿಸುತ್ತಾರೆ ಎಂದು ಹಿರಿಯ ಲೇಖಕ ಕುಂ.ವೀರಭದ್ರಪ್ಪ ತಿಳಿಸಿದರು.

ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಆಯೋಜಿಸಿದ್ದ 2025ನೇ ಸಾಲಿನ ಪ್ರತಿಷ್ಠಿತ ''''''''''''''''ಐದನಿ ಚಿನ್ನದ ಪದಕ'''''''''''''''' ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಐದು ದಶಕಗಳ‌ ಕಾಲ‌ ಪ್ರಾಗೈತಿಹಾಸಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಸಂಶೋಧಕ ಡಾ.ರವಿ ಕೋರಿಶೆಟ್ಟರ್ ಅವರ ಆಂಗ್ಲ ಕೃತಿಗಳು ಕನ್ನಡ ಭಾಷೆಗೆ ಭಾಷಾಂತರವಾಗಬೇಕು. ಆ ಮೂಲಕ ಸಮಸ್ತ ಕನ್ನಡಿಗರಿಗೆ ಅವರ ಸಂಶೋಧನಾ ಸಾಹಿತ್ಯ ತಲುಪಬೇಕು. ಅವರ ಸಂಶೋಧನೆಗಳು ಶಾಶ್ವತವಾಗಿ ಉಳಿಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಮಾತನಾಡಿ, ಶಿಕ್ಷಣಕ್ಕೆ ಮತ್ತು ವಿಜ್ಞಾನಕ್ಕೆ ವೈಚಾರಿಕತೆ ಬೇಕು. ಬದುಕಿಗೆ ತನ್ಮಯತೆ ಬೇಕು. ಎರಡೂ ಒಂದಕ್ಕೊಂದು ಸಂಬಂಧ ಇರಿಸಿಕೊಂಡಿವೆ. ಭವಿಷ್ಯಕ್ಕೆ ಏನೋ ಬೇಕು. ಅದಕ್ಕೆ ವರ್ತಮಾನದಲ್ಲಿ ಏನೋ ಆಗಬೇಕು. ಅಂತಹ ಸಂದರ್ಭದಲ್ಲಿ ನಾವಿದ್ದೇವೆ. ವಿಜಯನಗರ ಸಾಮ್ರಾಜ್ಯಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ. ಆದರೆ, ಮನುಷ್ಯನ ಇತಿಹಾಸಕ್ಕೆ ಸಹಸ್ರಾರು ವರ್ಷಗಳ ಹಿನ್ನೆಲೆ ಇದೆ. ಅದರ ಅಧ್ಯಯನ ಆಗಬೇಕು ಎಂದರು.

ಸಂಗನಕಲ್ಲಿನ ಬೀರಪ್ಪ ಶಿಲಾ ಚಪ್ಪರಕ್ಕೆ (ರಾಕ್ ಶೆಲ್ಟರ್‌ಗೆ) ಸಂರಕ್ಷಣೆ ಒದಗಿಸಬೇಕಿದೆ. ಅದಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಲು ಉಚಿತವಾಗಿ ಸಂಗೀತ ಕಾರ್ಯಕ್ರಮ ನೀಡಲು ನಾವು ಸಿದ್ಧರಿದ್ದೇವೆ. ಜಿಲ್ಲಾಡಳಿತ ಶೀಘ್ರದಲ್ಲೇ ಈ ಅವಕಾಶ ಸೃಷ್ಟಿಸಲಿ ಎಂದು ಅಪರ ಜಿಲ್ಲಾಧಿಕಾರಿಯವರನ್ನು ಹಂಸಲೇಖ ಕೋರಿದರು.‌

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಖ್ಯಾತ ಪ್ರಾಗೈತಿಹಾಸಿಕ ತಜ್ಞ ಪ್ರೊ. ರವೀಂದ್ರ ಕೋರಿಶೆಟ್ಟರ್, ನನಗೆ ದೇವನೂರು ಮಹಾದೇವ ಹಾಗೂ ಹಂಸಲೇಖ ಹಿರಿಯ ಸೋದರರಾಗಿದ್ದಾರೆ. ಬಾಲ್ಯದಿಂದಲೂ ಸಮಾಜಮುಖಿ ಜೀವನ ನಡೆಸುವ ಉದ್ದೇಶವಿತ್ತು. ಆದರೆ, ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಸಮಾಜದಿಂದ ದೂರವಿರಿಸಿತು. ಜನಸಾಮಾನ್ಯರಿಗೆ ಹತ್ತಿರವಾಗುವ ತುಡಿತ ಸದಾ ಇತ್ತು. ಕನ್ನಡ ಭಾಷೆಯ ಮೂಲಕ ನನ್ನ ಸಮಾಜಮುಖಿ ಜೀವನ ಈಗ ಸಾಧ್ಯವಾಗುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮಾತನಾಡಿ, ಇತಿಹಾಸ ಅರ್ಥಮಾಡಿಕೊಂಡರೆ ನಮ್ಮ ನಡುವಿನ‌ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಧರ್ಮ, ಸಂಸ್ಕೃತಿ, ಭಾಷೆ ಇತ್ಯಾದಿಗಳು ನಾವು ಕಟ್ಟಿಕೊಂಡದ್ದು. ಆದರೆ, ಮೂಲದಲ್ಲಿ ನಾವೆಲ್ಲರೂ ಒಂದೇ ಅನ್ನೋದನ್ನು ಪ್ರಾಗೈತಿಹಾಸಿಕ ಅಧ್ಯಯನ ತಿಳಿಸಿಕೊಡುತ್ತದೆ ಎಂದರು.

ವನ್ಯಜೀವಿ ತಜ್ಞ ಡಾ. ಸಮದ್ ಕೊಟ್ಟೂರು ಐದನಿ ಚಿನ್ನದ ಪದಕ ಪ್ರಶಸ್ತಿ ವಿಜೇತ ಪ್ರೊ. ರವಿ‌ ಕೋರಿಶೆಟ್ಟರ್ ಅವರ ಸಾಹಸಮಯ ಜೀವನ ಕುರಿತು ಮಾತನಾಡಿದರು.‌

ವೇದಿಕೆಯಲ್ಲಿ ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಲೀಲಾ ಸಂಪಿಗೆ, ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಉಪಸ್ಥಿತರಿದ್ದರು.

ರಾಚೋಟಯ್ಯ ಸ್ವಾಗತಿಸಿದರು. ಪತ್ರಕರ್ತ ಹರ್ಷಕುಮಾರ್ ಕುಗ್ವೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೌಮ್ಯ ಕೋಡೂರು ನಿರ್ವಹಿಸಿದರು. ಅಶ್ವಿನಿ ಡಿ.ವಿ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ