ಕೇಂದ್ರದ ಬಜೆಟ್‌ನತ್ತ ಉತ್ತರ ಕರ್ನಾಟಕ ಜನರ ಚಿತ್ತ

KannadaprabhaNewsNetwork | Published : Jul 23, 2024 12:31 AM

ಸಾರಾಂಶ

ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಕೊರತೆ ಸಾಕಷ್ಟು ಕಾಡುತ್ತಿದೆ. ಇದರಿಂದಾಗಿ ಇಲ್ಲಿನ ಯುವ ಜನತೆ ಉದ್ಯೋಗ ಅರಸಿ ಮುಂಬೈ, ಬೆಂಗಳೂರು, ಗೋವಾ, ಪುಣೆಗೆ ವಲಸೆ ಹೋಗುವುದು ಮಾಮೂಲಿ. ಕೇಂದ್ರ ಸರ್ಕಾರ ಕೈಗಾರಿಕೆಗಳ ಆಕರ್ಷಣೆಗೆ ಸಂಬಂಧಪಟ್ಟಂತೆ ಹಲವು ಕ್ರಮ ಕೈಗೊಂಡಿದೆ ಎಂದು ಹೇಳುತ್ತದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಜು. 23ರಂದು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಕೈಗಾರಿಕಾ ಕಾರಿಡಾರ್‌, ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ ಸೇರಿದಂತೆ ಹಲವು ನಿರೀಕ್ಷೆಗಳು ಉತ್ತರ ಕರ್ನಾಟಕ ಜನರದ್ದು. ಈ ನಡುವೆ ರೈಲ್ವೆ ಬಜೆಟ್‌ ಕೂಡ ಇದರಲ್ಲೇ ಬರುವುದರಿಂದ ರೈಲ್ವೆ ಯೋಜನೆಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಜನರದ್ದು.

ಕೈಗಾರಿಕಾ ಕಾರಿಡಾರ್‌:

ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಕೊರತೆ ಸಾಕಷ್ಟು ಕಾಡುತ್ತಿದೆ. ಇದರಿಂದಾಗಿ ಇಲ್ಲಿನ ಯುವ ಜನತೆ ಉದ್ಯೋಗ ಅರಸಿ ಮುಂಬೈ, ಬೆಂಗಳೂರು, ಗೋವಾ, ಪುಣೆಗೆ ವಲಸೆ ಹೋಗುವುದು ಮಾಮೂಲಿ. ಕೇಂದ್ರ ಸರ್ಕಾರ ಕೈಗಾರಿಕೆಗಳ ಆಕರ್ಷಣೆಗೆ ಸಂಬಂಧಪಟ್ಟಂತೆ ಹಲವು ಕ್ರಮ ಕೈಗೊಂಡಿದೆ ಎಂದು ಹೇಳುತ್ತದೆ. ಆದರೆ ಕೆಲವೊಂದಿಷ್ಟು ಬರೀ ಘೋಷಣೆಯಾಗಿಯೇ ಉಳಿದಿರುವುದು ಸ್ಪಷ್ಟ. ಇದರಲ್ಲಿ ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಘೋಷಿಸಿ 10 ವರ್ಷಕ್ಕಿಂತಲೂ ಜಾಸ್ತಿಯೇ ಆಗಿದೆ. ಆದರೆ ಅಂದುಕೊಂಡಷ್ಟು ಕೆಲಸ ಮಾತ್ರ ಆಗಿಲ್ಲ. ಈ ಕಾರಿಡಾರ್‌ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ ಮಾರ್ಗದಲ್ಲೇ ಹಾಯ್ದು ಹೋಗುವುದರಿಂದ ಇದಕ್ಕಾಗಿ ಈ ಭಾಗದ ಯುವಸಮೂಹದ ನಿರೀಕ್ಷೆ ಹೆಚ್ಚಿದೆ. ಇದಕ್ಕಾಗಿ ಈ ಕಾರಿಡಾರ್‌ಗೆ ಚಾಲನೆ ನೀಡುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು. ಈ ಕಾರಿಡಾರ್‌ಗೆ ರಾಜ್ಯ ಸರ್ಕಾರವೂ ಸಹಕಾರ ನೀಡಬೇಕಿದೆ.

ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ:

2015-16ರಲ್ಲಿ ಘೋಷಿಸಿದ ಕೇಂದ್ರವಿದು. ಧಾರವಾಡದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಜಿಲ್ಲಾಡಳಿತ 5 ಎಕರೆ ಜಮೀನು ಕೊಡಲು ಒಪ್ಪಿಗೆ ಸೂಚಿಸಿ 2018ರಲ್ಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಹೋಗಿಯೂ ಆಗಿದೆ. ಆದರೆ ಈವರೆಗೂ ಈ ಬಗ್ಗೆ ಕಿಂಚಿತ್ತೂ ಕೆಲಸಗಳಾಗಿಲ್ಲ. ಇದೀಗ ಈ ಇಲಾಖೆಯ ಸಚಿವರಾಗಿ ಇದೇ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ ಅವರಿದ್ದಾರೆ. ಈ ಬಜೆಟ್‌ನಲ್ಲಿ ಅದನ್ನು ಘೋಷಿಸಿ ಅನುದಾನ ಮೀಸಲಿಡಬೇಕು ಎನ್ನುವುದು ಜನರ ನಿರೀಕ್ಷೆ.

ವಿಧಿ ವಿಜ್ಞಾನ ವಿವಿ:

ಗುಜರಾತ್‌ನಲ್ಲಿನ ನ್ಯಾಷನಲ್‌ ಫಾರೆಸಿಕ್‌ ಸೈನ್ಸ್‌ ಯುನಿವರ್ಸಿಟಿಯ ಶಾಖೆಯನ್ನು ಧಾರವಾಡದಲ್ಲಿ ಪ್ರಾರಂಭಿಸಿ 2 ವರ್ಷಕ್ಕೂ ಅಧಿಕ ಕಾಲವೇ ಗತಿಸಿದೆ. ಆದರೆ ಪ್ರತ್ಯೇಕ ವಿವಿಯ ಹಂತಕ್ಕೆ ಇನ್ನು ತಲುಪಿಲ್ಲ. ಇದಕ್ಕೆ ಅಗತ್ಯವಿರುವ ಅನುದಾನ ನೀಡಲು ಈ ಬಜೆಟ್‌ನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಬೇಡಿಕೆ.

ರೈಲ್ವೆ:

ಈ ನಡುವೆ ರೈಲ್ವೆ ಬಜೆಟ್‌ ಕೂಡ ಈ ಬಜೆಟ್‌ ವ್ಯಾಪ್ತಿಯಲ್ಲೇ ಬರುವುದರಿಂದ ಈ ಭಾಗದ ಯೋಜನೆಗಳ ಬಗ್ಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಜನರ ನಿರೀಕ್ಷೆ. ರೈಲ್ವೆ ಕಾಮಗಾರಿ, ರೈಲ್ವೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಕಾಲೇಜ್‌ ನೀಡಲಿ ಸೇರಿದಂತೆ ಹಲವು ನಿರೀಕ್ಷೆ ಜನತೆಯದ್ದು.

ಹಾಗೇ ನೋಡಿದರೆ ಮೊದಲಿಗಿಂತ ರೈಲ್ವೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಆದರೂ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ, ಧಾರವಾಡ -ಬೆಳಗಾವಿ, ತುಮಕೂರ-ದಾವಣಗೆರೆ ಮಾರ್ಗ ಗಳಿಗೆ ಮಂಜೂರಾತಿ ದೊರೆತಿವೆ. ಈಗಲೂ ಬರೀ ಸಮೀಕ್ಷೆಗಳಲ್ಲೇ ಗಿರಕಿ ಹೊಡೆಯುತ್ತಿವೆ. ಕೆಲಸ ಮಾತ್ರ ಈ ವರೆಗೂ ಪ್ರಾರಂಭವಾಗುತ್ತಿಲ್ಲ. ಹಳೇ ಕಾಮಗಾರಿಗಳಾದ ಬಾಗಲಕೋಟೆ-ಕುಡಚಿ ಮಾರ್ಗ, ಗಿಣಗೇರ-ರಾಯಚೂರು, ಕಡೂರು- ಸಂಕಲೇಶಪುರ, ಗದಗ- ವಾಡಿ ಕೆಲಸಗಳು ವರ್ಷಗಳಿಂದಲೇ ಬರೀ ಕುಂಟುತ್ತಲೇ ಸಾಗಿವೆ. ಹೊಸ ಮಾರ್ಗಗಳ ಕೆಲಸಗಳು ಬೇಗನೇ ಶುರುವಾಗಬೇಕು. ಹಳೆ ಕೆಲಸ ಬೇಗನೆ ಮುಕ್ತಾಯವಾಗಬೇಕು. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು.

ವಂದೇ ಭಾರತ ರೈಲು:

ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚರಿಸುತ್ತಿದೆ. ಬೆಂಗಳೂರಿನಿಂದ ಬೆಳಗ್ಗೆ ಬರುವ ಈ ರೈಲು ಮಧ್ಯಾಹ್ನ ಧಾರವಾಡದಿಂದ ಹೊರಡುತ್ತದೆ. ಇದರೊಂದಿಗೆ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್‌ ಹೊಸ ರೈಲು ಸಂಚರಿಸುವಂತಾಗಬೇಕು. ಬೆಳಗ್ಗೆ ಬೆಳಗಾವಿಯಿಂದ ಮಧ್ಯಾಹ್ನ ಬೆಂಗಳೂರಿನಿಂದ ಬಿಡುವಂತಾಗಬೇಕು. ಈಗ ಧಾರವಾಡದಿಂದ ಸಂಚರಿಸುತ್ತಿರುವ ವಂದೇ ಭಾರತ್‌ ರೈಲನ್ನು ಬೆಳಗಾವಿ ವರೆಗೂ ವಿಸ್ತರಿಸಬೇಕು ಎಂಬುದು ಜನರ ನಿರೀಕ್ಷೆ.

ರೈಲ್ವೆ ಡಿಪ್ಲೊಮಾ:

ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಿದ್ದಾಗ 2011-12ರ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ದೇಶದ 6 ಕಡೆಗಳಲ್ಲಿ ರೈಲ್ವೆ ಎಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಕಾಲೇಜ್‌ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದು ಬರೀ ಘೋಷಣೆಯಾಗೇ ಉಳಿದಿದೆ. ಹುಬ್ಬಳ್ಳಿಯ ಎಂಟಿಎಸ್‌ ಕಾಲನಿಯಲ್ಲಿ ರೈಲ್ವೆ ಇಲಾಖೆಯ 13 ಎಕರೆ ಜಾಗೆಯಲ್ಲಿ ಈ ಡಿಪ್ಲೊಮಾ ಕಾಲೇಜ್‌ ಸ್ಥಾಪಿಸಬೇಕು. ಈ ಭಾಗದ ಯುವಕರ ಕೌಶಲ್ಯ ಹೆಚ್ಚಿಸಲು ಸಹಾಯ ಆಗುತ್ತದೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸಬೇಕು ಎಂಬ ಬೇಡಿಕೆ ಪ್ರಜ್ಞಾವಂತಹರದ್ದು.

Share this article