ಬಜೆಟ್‌ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅನುದಾನ ಅಗತ್ಯ

KannadaprabhaNewsNetwork | Published : Mar 16, 2025 1:46 AM

ಸಾರಾಂಶ

ಚಿತ್ರದುರ್ಗ ಒನಕೆ ಓಬವ್ವ ವೃತ್ತದ ಸಮೀಪ ಸಿಐಟಿಯು ಸಂಘಟನೆ ವತಿಯಿಂದ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾಳಮ್ಮ ಮಾತನಾಡಿದರು.

ಸಿಐಟಿಯು ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾಳಮ್ಮ ಆಗ್ರಹಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳಾ ಅಭಿವೃದ್ದಿ ಕಡೆಗಣಿಸಿದ್ದು ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಕಾಯ್ದಿರಿಸುವುದು ಅಗತ್ಯವೆಂದುಸಂಜೀವಿನಿ ನೌಕರರ ಸಂಘ ಹಾಗೂ ಫಲಾನುಭವಿಗಳ ಸಂಘದ ರಾಜ್ಯ ಮುಖಂಡೆ ಮಾಳಮ್ಮ ಹೇಳಿದರು.

ಸಿಐಟಿಯು ವತಿಯಿಂದ ಒನಕೆ ಓಬವ್ವ ವೃತ್ತದ ಸಮೀಪ ಶನಿವಾರ ನಡೆದ 117ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾಗಿದ್ದರೂ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಅತ್ಯಾಚಾರ ಇನ್ನು ನಿಂತಿಲ್ಲವೆಂದು ವಿಷಾಧ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಮಹಿಳೆಯರು ಹೋರಾಡಿದ ಇತಿಹಾಸವಿದೆ. ರೈತರು, ಮಹಿಳೆಯರು, ಕಾರ್ಮಿಕರನ್ನು ಬಿಟ್ಟು ದೇಶವಿಲ್ಲ. ಸ್ವಾತಂತ್ರ್ಯಕ್ಕಾಗಿ ಮಹಿಳೆಯರ ತ್ಯಾಗ, ಬಲಿದಾನವಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಕಡಿಮೆಯಾಗಿಲ್ಲ. ಯಾವುದೇ ಸರ್ಕಾರ ಆಡಳಿತಕ್ಕೆ ಬರಲಿ ಮಹಿಳೆಯರ ರಕ್ಷಣೆ ಕುರಿತು ಚಿಂತಿಸುತ್ತಿಲ್ಲ. ಈ ಸಂಬಂಧ ಈಗಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಕಳೆದ 7ರಂದು ಮಂಡಿಸಿರುವ ಬಜೆಟ್‍ನಲ್ಲಿ ಮಹಿಳೆಯರಿಗೆ ಯಾವುದೇ ಉಪಯೋಗವಾಗಿಲ್ಲವೆಂದು ದೂರಿದರು.

ಸಿಐಟಿಯು ಜಿಲ್ಲಾ ಸಂಚಾಲಕಿ ಎನ್.ನಿಂಗಮ್ಮ ಮಾತನಾಡಿ, ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇನ್ನು ನಿಂತಿಲ್ಲ. ಅಗಸರಹಳ್ಳಿಯಲ್ಲಿ 3ನೇ ತರಗತಿ ಬಾಲಕಿಗೆ ಐಸ್‍ಕ್ರೀಂ, ಚಾಕಲೇಟ್ ಆಸೆ ತೋರಿಸಿ ವೃದ್ಧನೋರ್ವ ಅತ್ಯಾಚಾರವೆಸಗಿದ್ದಾನೆ. ಶಿಕ್ಷಣದಲ್ಲಿ ಮಹಿಳೆಗೆ ಸಮಾನತೆಯಿಲ್ಲ. ಕೇವಲ ಅಡುಗೆ ಕೋಣೆಗಷ್ಟೆ ಮಹಿಳೆಯನ್ನು ಮೀಸಲಿಡಲಾಗಿದೆ. ಎಲ್ಲಾ ರಂಗಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಹಾಗಾಗಿ ಮಹಿಳೆ ಎಚ್ಚೆತ್ತುಕೊಂಡು ತನ್ನ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ ಮಾತನಾಡಿ, ಮಹಿಳೆ ಮೇಲಿನ ದೌರ್ಜನ್ಯ, ಶೋಷಣೆ ವಿರುದ್ಧ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಮಹಿಳೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯದಂತೆ ಸುರಕ್ಷತೆ ಕ್ರಮ ವಹಿಸಬೇಕು. ರಾತ್ರಿ ಪಾಳೆಯದಲ್ಲಿ ಮಹಿಳೆ ಕೆಲಸ ಮಾಡುವುದು ನಿಲ್ಲಬೇಕು. ಒಂದು ವೇಳೆ ಕೆಲಸ ಮಾಡಬೇಕಾದಂತ ಅನಿವಾರ್ಯತೆ ಕಂಡು ಬಂದಲ್ಲಿ ಸುರಕ್ಷಿತ ಪ್ರಯಾಣ ಮತ್ತು ಇತರೆ ಸೌಲತ್ತುಗಳನ್ನು ಒದಗಿಸುವಂತೆ ಮನವಿ ಮಾಡಿದರು.

ಸಿಐಟಿಯು ಸಂಚಾಲಕ ಸಿ.ಕೆ.ಗೌಸ್‍ಪೀರ್, ಟಿ.ನಿಂಗಣ್ಣ ರಾಜಮ್ಮ, ಕೆ.ಮಂಜುಳ, ಇಂದಿರಮ್ಮ, ಕಲ್ಯಾಣಮ್ಮ, ಸಣ್ಣಮ್ಮ, ಚಂದ್ರಮ್ಮ, ಜಯಲಕ್ಷ್ಮಿ, ಹನುಮಕ್ಕ, ತನುಜ, ಟಿ.ತಿಪ್ಪೇಸ್ವಾಮಿ, ಸೇರಿದಂತೆ ನೂರಾರು ಮಹಿಳೆಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share this article