)
ಕನ್ನಡಪ್ರಭ ವಾರ್ತೆ, ಬೆಂಗಳೂರುನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಈ ಬಾರಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಶನಿವಾರ ಸಿಇಟಿ ಫಲಿತಾಂಶ ಪ್ರಕಟಿಸಿದ ವೇಳೆ ಈ ಮಾಹಿತಿ ನೀಡಿದ ಅವರು, ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಫಲಿತಾಂಶ ತಡವಾಗಲಿದೆ. ಅಲ್ಲಿಯವರೆಗೆ ಎಂಜಿನಿಯರಿಂಗ್ ಹಾಗೂ ಇತರೆ ವಿಭಾಗಗಳ ಸೀಟು ಹಂಚಿಕೆ ಮಾಡದೆ ಇರಲು ಆಗುವುದಿಲ್ಲ. ಮೊದಲು ವೈದ್ಯಕೀಯ ಹೊರತುಪಡಿಸಿ ಉಳಿದೆಲ್ಲಾ ಕೋರ್ಸುಗಳ ಸೀಟು ಹಂಚಿಕೆಗೆ ಶೀಘ್ರ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು. ನೀಟ್ ಫಲಿತಾಂಶ ಮತ್ತು ರ್‍ಯಾಂಕ್ ಪಟ್ಟಿ ಲಭ್ಯವಾದ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸುತ್ತೇವೆ ಎಂದರು.ಪ್ರತ್ಯೇಕ ಕೌನ್ಸೆಲಿಂಗ್ ನಡೆಸಿದರೂ ಸಹ ವೈದ್ಯಕೀಯ ಸೀಟು ಹಂಚಿಕೆ ನಂತರ ತೆರವಾಗುವ ಎಂಜಿನಿಯರಿಂಗ್ ಸೇರಿದಂತೆ ಇತರೆ ಕೋರ್ಸುಗಳ ಸೀಟುಗಳನ್ನು ನಂತರದ ಸುತ್ತುಗಳಲ್ಲಿ ಒಳಪಡಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುವುದು. ಅದೇ ರೀತಿ ವೈದ್ಯಕೀಯ ಸೀಟುಗಳಿಗೆ ಸಂಬಂಧಿಸಿದಂತೆ, ಮೊದಲನೇ ಸುತ್ತಿನಲ್ಲಿ ಅಖಿಲ ಭಾರತ ಹಾಗೂ ಪ್ರಾಧಿಕಾರ ಎರಡೂ ಕಡೆ ಹಂಚಿಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅಖಿಲ ಭಾರತ ಕೋಟದ ಸೀಟಿಗೆ ಪ್ರವೇಶ ಪಡೆಯಲು ಇಚ್ಚಿಸಿದಲ್ಲಿ, ಪ್ರಾಧಿಕಾರದಿಂದ ಹಂಚಿಕೆಯಾದ ಸೀಟನ್ನು ಬಿಟ್ಟುಕೊಡಲು ದಂಡ ಪಾವತಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಪ್ರೀ ಸುತ್ತಿನ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಲಾಗಿದ್ದು, ಇಲ್ಲಿ ಹಂಚಿಕೆಯಾದ ಸೀಟು ಶೇ.100 ಇಷ್ಟ ಆಗುವ ಅಭ್ಯರ್ಥಿಗಳು ಕಾಲೇಜಿಗೆ ಸೇರಬಹುದು ಅಥವಾ ಮುಂದಿನ 1ನೇ ಸುತ್ತಿನಲ್ಲಿ ಭಾಗವಹಿಸಬಹುದು ಎಂಬ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.ಮಾರ್ಗದರ್ಶಕರಾಗಲು ಹಿರಿಯ ವಿದ್ಯಾರ್ಥಿಗಳಿಗೆ ಕೆಇಎ ಕನೆಕ್ಟ್ ಆ್ಯಪ್:ಕಳೆದ ವರ್ಷ ಕೆಇಎ ಕೌನ್ಸೆಲಿಂಗ್ ಮೂಲಕ ಸೀಟು ಪಡೆದು ಸದ್ಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿರಿಯ ವಿದ್ಯಾರ್ಥಿಗಳನ್ನೇ ಈ ಬಾರಿ ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಲು ಕೆಇಎ ಕನೆಕ್ಟ್ ಎನ್ನುವ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.ಆಸಕ್ತ ಹಿರಿಯ ವಿದ್ಯಾರ್ಥಿಗಳು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಬಹುದು. ಅದೂ ವರ್ಚುವಲ್ ಮೂಲಕ ನಡೆಯಲಿದೆ. ಒಬ್ಬ ಹಿರಿಯ ವಿದ್ಯಾರ್ಥಿ ಐವರಿಗೆ ಸಲಹೆ ನೀಡಬಹುದು. ಇದು ಕಡ್ಡಾಯವೇನೂ ಅಲ್ಲ. ಇಷ್ಟ ಇದ್ದರೆ ಕೆಇಎ ಕನೆಕ್ಟ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಸದ್ಯ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹಿರಿಯರಿಗೆ ಆ್ಯಪ್ ಮೂಲಕ ರಿಕ್ಷೆಸ್ಟ್ ಕಳುಹಿಸಲಿದ್ದಾರೆ ಎಂದು ಪ್ರಸನ್ನ ತಿಳಿಸಿದರು.