ಹಾವೇರಿ ಜಿಲ್ಲೆಗೆ ಶೀಘ್ರ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್

KannadaprabhaNewsNetwork |  
Published : Nov 16, 2026, 02:15 AM IST
ಹಿರೇಕೆರೂರು ಪಟ್ಟಣದ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯದ ಶಾಂತಿನಿಕೇತನ ಆವರಣದಲ್ಲಿ ನಡೆದ 73ನೇ ಸಹಕಾರ ಸಪ್ತಾಹ-2026 ಕಾರ್ಯಕ್ರಮವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೆಲವೇ ದಿನಗಳಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಂಜೂರು ಮಾಡಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಹಿರೇಕೆರೂರು: ಕೆಲವೇ ದಿನಗಳಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಂಜೂರು ಮಾಡಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯದ ಶಾಂತಿನಿಕೇತನ ಆವರಣದಲ್ಲಿ ರಾಜ್ಯ ಸಹಕಾರ, ಹಾಲು, ತೋಟಗಾರಿಕೆ, ಉಣ್ಣೆ ಕೈಮಗ್ಗ ನೇಕಾರ ಮಹಾಮಂಡಲ, ಧಾರವಾಡ ಕೆಸಿಸಿ ಬ್ಯಾಂಕ್, ಹಾವೇರಿ ಹಾಲು ಒಕ್ಕೂಟ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘ, ಬ್ಯಾಂಕ್ ಸೌಹಾರ್ದ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಸ್ಥಾಪನೆಗೆ ನಾನು ಚರ್ಚೆ ಮಾಡಿದ್ದೇನೆ. ಕೆಸಿಸಿ ಬ್ಯಾಂಕ್‌ ಅಧ್ಯಕ್ಷರು ಕಾರ್ಯಪ್ರವೃತ್ತರಾಗಿ ಸರ್ವ ಸಾಧಾರಣ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಹೊಸ ಬ್ಯಾಂಕ್ ಸ್ಥಾಪನೆ ಮಾಡುವುದು ಸುಲಭ, ಅದನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿಯನ್ನು ಜಿಲ್ಲೆಯ ಶಾಸಕರು, ಸಹಕಾರಿಗಳು ನಿರ್ವಹಿಸಬೇಕು. ಕೆಲವೇ ದಿನಗಳಲ್ಲಿ ಜಿಲ್ಲೆಗೆ ಮಧ್ಯವರ್ತಿ ಬ್ಯಾಂಕ್ ಮಂಜೂರು ಮಾಡಿಕೊಡುವ ಕೆಲಸ ಮಾಡುತ್ತೇನೆ. ಎಲ್ಲರೂ ಸೇರಿ ಜಿಲ್ಲೆಯಲ್ಲಿ ಬಲಾಢ್ಯವಾದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕಟ್ಟೋಣ ಎಂಬ ಸಂಕಲ್ಪ ಮಾಡೋಣ. ಈ ಸಂಕಲ್ಪ ಸಿದ್ಧಿಗೆ ತ್ಯಾಗ, ಶ್ರಮ ನಿಮ್ಮದಾಗಬೇಕು ಎಂದರು.

ಬರೀ ಮಾತನಾಡುವುದು ಸಾಧನೆಯಾಗಬಾರದು, ಈ ಕ್ಷೇತ್ರದಲ್ಲಿ ನಾವು ಮಾಡುವ ಕೆಲಸ ನಮ್ಮ ಸಾಧನೆಗಳು ಮಾತನಾಡಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕು. ಅದು ನಮ್ಮ ಗುರಿ ಮತ್ತು ಜವಾಬ್ದಾರಿಯಾಗಬೇಕು. ಹಾವೇರಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಹು ವಿಸ್ತಾರವಾಗಿ ಬೆಳದಿದೆ. ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಬೇಕು ಮತ್ತು ಶಕ್ತಿಯುತವಾಗಿ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಹಾವೇರಿ ಜಿಲ್ಲೆಯಲ್ಲಿ ಏನಾದರೂ ಒಂದು ಬದಲಾವಣೆ ಮಾಡಬೇಕು ಎಂಬ ಸಾಮರ್ಥ್ಯ ಇರುವ ಸಹಕಾರಿಗಳು ಇಲ್ಲಿರುವುದರಿಂದ ಮುಂಬರುವ ದಿನಗಳಲ್ಲಿ ಹಾವೇರಿ ಜಿಲ್ಲೆ ಸಹಕಾರಿ ಕ್ಷೇತ್ರ ಹೆಸರುವಾಸಿಯಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದರು.

ಸಕ್ಕರೆ ಮತ್ತು ಜವಳಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಸಹಕಾರ ತಳಹದಿ ಮೇಲೆ ದೇಶವನ್ನು ಮುನ್ನಡೆಸುವ ಕಾರ‍್ಯವನ್ನು ಸಹಕಾರ ಸಂಘಗಳು ಮಾಡುತ್ತಿವೆ. ನಮ್ನ ಜಿಲ್ಲೆಯಲ್ಲಿ ಸಹಕಾರ ರಂಗ ಸದೃಢವಾಗಿದೆ. ಅನೇಕ ಹಿರಿಯ ಸಹಕಾರಿಗಳ ಪರಿಶ್ರಮ ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯ.ಬಿ. ಬಣಕಾರ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯಲ್ಲಿ ಸಹಕಾರ ರಂಗ ಉತ್ತಮವಾಗಿ ಕೆಲಸ ಮಾಡುವ ಮೂಲಕ ದೇಶದಲ್ಲಿ ಹೆಸರು ಮಾಡಿದೆ. ಸಹಕಾರ ಕ್ಷೇತ್ರ ಸಮೃದ್ಧವಾದ ಕ್ಷೇತ್ರವಾಗಿದೆ. ಗ್ರಾಮೀಣರಿಗೆ ಆಶಾಕಿರಣವಾಗಿದೆ. ಇದರ ಅಭಿವೃದ್ಧಿಗೆ ಸರ್ವರೂ ಮತ್ತಷ್ಟು ಶ್ರಮಿಸಬೇಕು ಎಂದರು.

ಚನ್ನಬಸಪ್ಪ ಮಲ್ಕಪ್ಪ ಹುಲ್ಲತ್ತಿ ಅವರಿಗೆ ಶ್ರೇಷ್ಠ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ, ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಎಸ್.ಬಿ. ತಿಪ್ಪಣ್ಣನವರ, ಚಂದ್ರಪ್ಪ ಜಾಲಗಾರ, ಉಜ್ಜನಗೌಡ ಮಾವಿನತೋಪ, ಸಹಕಾರಿ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ, ಸಹಾಯಕ ನಿಬಂಧಕರಾದ ವಿಕ್ರಮ ಕುಲಕರ್ಣಿ, ಎಸ್.ಜಿ. ಸುಣಗಾರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌