ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋಟ್ಪಾ- 2003 ಕಾಯ್ದೆ ಅನುಷ್ಠಾನದ ಕುರಿತ ದ್ವಿತೀಯ ತ್ರೈಮಾಸಿಕ ಸಭೆ ನಡೆಯಿತು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿದರು.
ಕೋಟ್ಪಾ- 2003 ಕಾಯ್ದೆ ಅನುಷ್ಠಾನ ಕುರಿತ ದ್ವಿತೀಯ ತ್ರೈಮಾಸಿಕ ಸಭೆಕನ್ನಡಪ್ರಭ ವಾರ್ತೆ ಉಡುಪಿ
ಅಂಗಡಿಗಳು ಉದ್ದಿಮೆ ಪರವಾನಗಿ ಜೊತೆಗೆ ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಹೊಂದಬೇಕು. ಆದರೆ ಪ್ರಸ್ತುತ ಸಾಕಷ್ಟು ಮಂದಿ ವ್ಯಾಪಾರಿಗಳು ಈ ಪ್ರತ್ಯೇಕ ಪರವಾನಗಿ ಹೊಂದಿಲ್ಲ. ಆದ್ದರಿಂದ ತಕ್ಷಣ ತಂಬಾಕು ಉತ್ಪನ್ನ ಮಾರಾಟಗಾರರು ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋಟ್ಪಾ- 2003 ಕಾಯ್ದೆ ಅನುಷ್ಠಾನದ ಕುರಿತ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರದ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನು ಗುರುತಿಸಲು ರಚಿಸಿರುವ ವೆಬ್‌ಸೈಟ್‌ನಲ್ಲಿ ಪ್ರತಿಯೊಂದು ಶಾಲೆ, ಕಾಲೇಜುಗಳು ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆಯ ಮಾನದಂಡಗಳಿಗೆ ಬದ್ಧವಾಗಿರುವುದರ ಕುರಿತು ಪರಿಶೀಲಿಸಿ, ನಮೂದಿಸಬೇಕು. ಇದರಲ್ಲಿಯೂ ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಜಿಲ್ಲೆಯ 1069 ಶಾಲೆಗಳಲ್ಲಿ 504 ಶಾಲೆಗಳನ್ನು ಮಾತ್ರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಂದು ವಾರದ ಒಳಗಾಗಿ ವೆಬ್‌ಸೈಟ್‌ನಲ್ಲಿ ಅಪ್ ಡೇಟ್ ಮಾಡಬೇಕು ಎಂದು ಸೂಚಿಸಿದರು.5 ಗ್ರಾಪಂ ತಂಬಾಕುಮುಕ್ತ !
ಜಿಲ್ಲೆಯಲ್ಲಿ 155 ಗ್ರಾಪಂಗಳಿದ್ದು, ಅವುಗಳಲ್ಲಿ ಕೇವಲ 5 ಗ್ರಾಪಂಗಳು ತಂಬಾಕಮುಕ್ತವಾಗಿವೆ. ಈ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿ ಅವರ ಮನವೊಲಿಸಿ, ತಂಬಾಕು ಮುಕ್ತ ಹಳ್ಳಿಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು.ಸಭೆಯಲ್ಲಿ ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.----------
5 ತಿಂಗಳಲ್ಲಿ 52,900 ರು. ದಂಡ!
ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಿಂದ ಈವರೆಗೆ 23ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿ, ಕೋಟ್ಪಾ ಕಾಯ್ದೆಯಡಿ 324ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 52,900 ರು. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದ 60 ಪ್ರಕರಣಗಳಿಂದ 6750 ರು. ದಂಡ ವಸೂಲಿ ಮಾಡಲಾಗಿದೆ ಎಂದ ಜಿಲ್ಲಾಧಿಕಾರಿ ಸ್ವರೂಪ, ದಾಳಿಗಳ ಪ್ರಮಾಣ ಇನ್ನೂ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.