ಓಟಿಎಸ್‌ಗೆ ಮುಗಿಬಿದ್ದ- ಜನ ಕೈಕೊಟ್ಟ ಬಿಬಿಎಂಪಿ ಸರ್ವರ್‌! ಬಾಕಿ ಆಸ್ತಿ ತೆರಿಗೆ ಕಟ್ಟಲು ಬಂದವರಿಗೆ ಭಾರಿ ನಿರಾಸೆ

KannadaprabhaNewsNetwork | Updated : Aug 01 2024, 12:37 PM IST

ಸಾರಾಂಶ

ಬಾಕಿ ಆಸ್ತಿ ತೆರಿಗೆ ಕಟ್ಟಲು ಬಂದವರಿಗೆ ಭಾರಿ ನಿರಾಸೆ ಕಾದಿತ್ತು. ಬಿಬಿಎಂಪಿ ಸರ್ವರ್‌ ತೊಂದರೆ ಕಾಣಿಸಿಕೊಂಡು ಜನರು ಪರದಾಡಿದರು.

 ಬೆಂಗಳೂರು : ಒನ್‌ ಟೈಮ್ ಸೆಟ್ಟಲ್ಮೆಂಟ್‌’ (ಒಟಿಎಸ್‌) ಯೋಜನೆಯ ಲಾಭ ಪಡೆಯಲು ಕೊನೆಯ ದಿನವಾದ ಬುಧವಾರ ಆಸ್ತಿ ತೆರಿಗೆ ಬಾಕಿದಾರರು ಮುಗಿಬಿದ್ದ ಹಿನ್ನೆಲೆಯಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿ ಪರದಾಡಿದರು.

ಬುಧವಾರ ಭಾರೀ ಸಂಖ್ಯೆಯಲ್ಲಿ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಸುವ ವೆಬ್‌ಸೈಟ್‌ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿತ್ತು. ಇದರಿಂದ ಹಲವರು ಓಟಿಎಸ್‌ ಲಾಭ ಪಡೆಯುವುದರಿಂದ ವಂಚಿತರಾದರು. ಈ ರೀತಿ ಸಮಸ್ಯೆ ಉಂಟಾಗಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿಯ ಕಂದಾಯ ಕಚೇರಿಗಳನ್ನು ರಾತ್ರಿ 9 ಗಂಟೆವರೆಗೆ ಕಾರ್ಯವಹಿಸಲು ಸೂಚಿಸಲಾಗಿತ್ತು. ಹೀಗಾಗಿ ಬಿಬಿಎಂಪಿಯ ಕೇಂದ್ರ ಕಚೇರಿ ಸೇರಿದಂತೆ ಕಂದಾಯ ಉಪ ವಿಭಾಗದ ಕಚೇರಿಯಲ್ಲಿ ಅಧಿಕಾರಿ- ಸಿಬ್ಬಂದಿ ತಡರಾತ್ರಿವರೆಗೆ ಕಾರ್ಯ ನಿರ್ವಹಿಸಿದರು. ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಸಾಧ್ಯವಾಗದವರು ಎಸ್‌ಎಎಸ್‌ ಅರ್ಜಿ ಭರ್ತಿ ಮಾಡಿ ಆಫ್‌ಲೈನ್‌ನಲ್ಲಿ ಡಿಡಿ ಹಾಗೂ ಚೆಕ್‌ ಮೂಲಕ ಪಾವತಿ ಮಾಡಿದರು.

₹150 ಕೋಟಿ ಆಫ್‌ಲೈನ್‌ ಪಾವತಿ:

ಬಿಬಿಎಂಪಿಯ ಕೇಂದ್ರ ಕಚೇರಿ, ವಲಯ ಕಚೇರಿ ಸೇರಿದಂತೆ ಕಂದಾಯ ಕಚೇರಿಗಳಲ್ಲಿ ಬುಧವಾರ 100 ರಿಂದ 150 ಕೋಟಿ ರುಪಾಯಿಗಳನ್ನು ಡಿಡಿ ಮತ್ತು ಚೆಕ್‌ಗಳ ಮೂಲಕ ಆಫ್‌ಲೈನ್‌ನಲ್ಲಿ ಪಾವತಿಸಲಾಗಿದೆ.

₹3,100 ಕೋಟಿ ಗಡಿ ದಾಟಿದ ಆಸ್ತಿ ತೆರಿಗೆ ಸಂಗ್ರಹ:

ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಗೆ ಜುಲೈ ಅಂತ್ಯದ ವರೆಗೆ ಶೇಕಡ 5ರಷ್ಟು ರಿಯಾಯಿತಿ ಹಾಗೂ ಸುಸ್ತಿದಾರರಿಗೆ ದಂಡ ಮತ್ತು ಬಡ್ಡಿ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಸಂಗ್ರಹ ಜು.31ಕ್ಕೆ ₹3100 ಕೋಟಿ ಗಡಿದಾಟಿದೆ. ಈ ಪೈಕಿ ₹3028 ಕೋಟಿ ಈಗಾಗಲೇ ಆನ್‌ಲೈನ್‌ ಪಾವತಿ ಮೂಲಕ ಜಮೆಯಾಗಿದ್ದು, ₹100 ಕೋಟಿಗೂ ಅಧಿಕ ಮೊತ್ತ ಚೆಕ್‌ ಮತ್ತು ಡಿಡಿ ಮೂಲಕ ಬಂದಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಆಸ್ತಿ ಹರಾಜಿಗೆ ಸಿದ್ಧತೆ

ಆ.1ರಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನಿಯಮಿತವಾಗಿ ಮೂರು ಬಾರಿ ನೋಟಿಸ್‌ ನೀಡಿ ಆಸ್ತಿ ತೆರಿಗೆ ವಸೂಲಿ ಮಾಡುವುದು. ಒಂದು ವೇಳೆ ಪಾವತಿ ಮಾಡದಿದ್ದರೆ ಚರಾಸ್ತಿ ಜಪ್ತಿ ಇಲ್ಲವೇ ಬ್ಯಾಂಕ್‌ ಖಾತೆ ಮತ್ತು ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕುವುದು. ಅಗತ್ಯವಾದರೆ, ಸ್ಥಿರಾಸ್ತಿಯನ್ನು ಹರಾಜು ಹಾಕಲು ಕಂದಾಯ ವಿಭಾಗದ ಅಧಿಕಾರಿಗಳು ತಯಾರಿ ಆರಂಭಿಸುತ್ತಿದ್ದಾರೆ.ಒಟಿಎಸ್‌ ವಿಸ್ತರಣೆ?

ಕೊನೆಯ ದಿನ ಸರ್ವರ್‌ ಸಮಸ್ಯೆ ಹಾಗೂ ಇನ್ನಷ್ಟು ಮಂದಿ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ಓಟಿಎಸ್ ಯೋಜನೆಯನ್ನು ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ಅಂತಿಮ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Share this article