ಸರ್ವರ್ ಸಮಸ್ಯೆ: ಇನ್ನೂ ವಿತರಣೆಯಾಗದ ಪಡಿತರ

KannadaprabhaNewsNetwork | Updated : Oct 19 2024, 12:16 AM IST

ಸಾರಾಂಶ

ಅಕ್ಟೋಬರ್ ಮುಗಿಯುತ್ತಾ ಬಂದರೂ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸಿಕ್ಕಿಲ್ಲ, ಅ.೧೫ರ ಬಳಿಕ ಸರ್ವರ್ ಲಭ್ಯವಾಗಲಿದೆ ನಂತರ ಅಕ್ಕಿ ವಿತರಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ತಿಂಗಳಾಂತ್ಯ ಸಮೀಪಿಸುತ್ತಿದ್ದರೂ ಅಕ್ಕಿ ಪೂರೈಸಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆಹಾರ ಇಲಾಖೆಯ ಸರ್ವರ್ ಮೇಲ್ದಜೆಗೆ ಏರಿಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ವಿತರಣೆಗೆ ಸರ್ವರ್ ಇಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುತ್ತಿದ್ದರೆ, ಮತ್ತೊಂದೆಡೆ ಪಡಿತರ ಚೀಟಿದಾರರು ಸಮಯಕ್ಕೆ ಅಕ್ಕಿ ಸಿಗದೆ ಪರಿತಪಿಸುವಂತಾಗಿದೆ. ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ಇದುವರೆಗೂ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸಿಕ್ಕಿಲ್ಲ, ಅ.೧೫ರ ಬಳಿಕ ಸರ್ವರ್ ಲಭ್ಯವಾಗಲಿದೆ ನಂತರ ಅಕ್ಕಿ ವಿತರಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ತಿಂಗಳಾಂತ್ಯ ಸಮೀಪಿಸುತ್ತಿದ್ದರೂ ಅಕ್ಕಿ ಪೂರೈಸಿಲ್ಲ.

ದೇಶಾದ್ಯಂತ ಒಂದೇ ಮಾದರಿ

ಬಡವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸಿಗದೆ ನಿತ್ಯ ನ್ಯಾಯಬೆಲೆ ಅಂಗಡಿಗಳ ಬಳಿ ಬಂದು ಬಾಗಿಲು ಮುಚ್ಚಿರುವುದನ್ನು ಕಂಡು ಬರೀಗೈಯಲ್ಲಿ ವಾಪಸ್ ಹೋಗುವಂತಾಗಿದೆ. ಇಷ್ಟು ವರ್ಷಗಳ ಕಾಲ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರದ ಒಂದೇ ಮಾದರಿಯ ಸರ್ವರ್ ವ್ಯವಸ್ಥೆ ಇತ್ತು. ಇದರಿಂದ ಪ್ರತಿ ತಿಂಗಳು ಸಮರ್ಪಕವಾಗಿ ಆಹಾರ ಧಾನ್ಯಗಳನ್ನು ವಿತರಿಸಲು ಸರ್ವರ್ ಸಮಸ್ಯೆ ಕಾಡುತ್ತಿತ್ತು,

ರಾಜ್ಯಕ್ಕೆ ಪ್ರತ್ಯೇಕ ಸರ್ವರ್‌

ಈ ಸಮಸ್ಯೆಯನ್ನು ಅರಿತ ರಾಜ್ಯ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಸರ್ವರ್ ಅಳವಡಿಸಿ ಸರ್ವರ್ ಸಮಸ್ಯೆ ಪರಿಹರಿಸಲು ನಿರ್ಧರಿಸಿತು. ಅದರಂತೆ ಅಕ್ಟೋಬರ್ ಮಾಹೆಯಿಂದ ಚಾಲ್ತಿಗೆ ಬರುವಂತೆ ಪ್ರತ್ಯೇಕವಾಗಿ ಸರ್ವರ್ ಅಳವಡಿಸುತ್ತಿದೆ, ಆದರೆ ತಿಂಗಳ ಆರಂಭದಲ್ಲೆ ಸಮಸ್ಯೆಯನ್ನು ನೀಗಿಸದೆ ತಿಂಗಳು ಅಂತ್ಯಕ್ಕೆ ೧೨ದಿನಗಳು ಮಾತ್ರ ಇದ್ದರೂ ಇನ್ನೂ ಸರ್ವರ್ ಪ್ರಾಯೋಗಿ ಹಂತದಲ್ಲಿದೆ. ಇದರಿಂದ ನ್ಯಾಯಬೆಲೆಯಲ್ಲಿ ಸಿಗುವ ಅಕ್ಕಿಯನ್ನೇ ನಂಬಿಕೊಂಡಿರುವ ಬಡವರಿಗೆ ಅಕ್ಕಿ ಸಿಗದೆ ವಂಚಿತರಾಗುವಂತಾಗಿದೆ.ಇದರಿಂದ ನ್ಯಾಯಬೆಲೆ ಅಂಡಗಿಗಳ ಮಾಲೀಕರೂ ಆತಂಕಗೊಳ್ಳುವಂತಾಗಿದೆ. ತಿಂಗಳ ಕೊನೆಯಲ್ಲಿ ಹೇಗಪ್ಪ ಆಹಾರ ಪದಾರ್ಥಗಳನ್ನು ವಿತರಿಸುವುದು ಎಂಬ ಚಿಂತೆಗೀಡಾಗಿದ್ದಾರೆ.

ಮೊದಲು ರಾಗಿ ಗೋದಾಮಿನಲ್ಲಿ ದಾಸ್ತಾನಿಲ್ಲವೆಂದು ಮೊದಲು ೧೫ ದಿನ ಅಕ್ಕಿ ಎತ್ತುವಳಿಗೆ ಅವಕಾಶ ನೀಡಿಲ್ಲ, ಬಳಿಕ ಮಳೆ ಕಾರಣದಿಂದ ರಾಗಿ ಸಹ ಹಾಸನದಿಂದ ಪಟ್ಟಣಕ್ಕೆ ಬಾರದೆ ಮತ್ತಷ್ಟು ವಿಳಂಬವಾಯಿತು. ಇದುವರೆಗೂ ಕೇವಲ ೩೦ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಪೂರೈಕೆಯಾಗಿದೆ. ಇನ್ನೂ ರಾಜ್ಯದ ಸರ್ವರ್ ಸಮರ್ಪಕವಾಗಿ ಜಾರಿಯಾಗದೆ ಪ್ರಾಯೋಗಿಕ ಹಂತದಲ್ಲಿರುವ ಕಾರಣ ನ್ಯಾಯಬೆಲೆ ಅಂಗಡಿ ಮಾಲೀಕರು ಅಡಕತ್ತರಿಗೆ ಸಿಲುಕುವಂತಾಗಿದೆ.

ಸಮಸ್ಯೆಗೆ ಪರಿಹಾರ ಯಾವಾಗ?

ಅತ್ತ ಪಡಿತರ ಚೀಟಿದಾರರು ಸಹ ಸರ್ಕಾರ ಅಕ್ಕಿಗಾಗಿ ಚಾಥಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬ ಇದ್ದು ಹಬ್ಬಕ್ಕಾಗಿ ಅಕ್ಕಿಯ ನಿರೀಕ್ಷೆಯಲ್ಲಿರುವ ಕಾರ್ಡುದಾರರಿಗೆ ಅಷ್ಟೊತ್ತಿಗೆ ಅಕ್ಕಿ ಸಿಗುವೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ. ಇತ್ತ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಸಮಸ್ಯೆ ನೀಗಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಕಾಯಿರಿ ಎಂಬ ಉತ್ತರ ಮಾತ್ರ ನೀಡುತ್ತಿದ್ದಾರೆ. ಆದರೆ ಯಾವಾಗ ಹೊಸ ಸರ್ವರ್ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿಲ್ಲ ಎಂಬುದು ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಪವಾಗಿದೆ.

Share this article