ಕನ್ನಡಪ್ರಭ ವಾರ್ತೆ ಉಡುಪಿ
ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಭಾನುವಾರ ಅಂಬಾಗಿಲು ಕಕ್ಕುಂಜೆ ಸಮೀಪದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕ್ರೈಸ್ತ ಸಮುದಾಯದ ಸೇವೆಯನ್ನು ಎಲ್ಲ ವ್ಯಕ್ತಿಗಳು ಗುರುತಿಸುತ್ತಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಹಾಗೂ ಸಾಮಾಜಿಕ ಸೇವೆ ಸಂಘಟನೆಗಳಲ್ಲಿ ಚುನಾಯಿತರಾದವರು ದೀನದಲಿತರ ಹಿಂದುಳಿದವರ ನೋವುಗಳಿಗೆ ಸ್ಪಂದಿಸಿ ಅವರ ಕೆಲಸವನ್ನು ಮಾಡಿಕೊಟ್ಟಾಗ ಅದಕ್ಕಿಂದ ದೊಡ್ಡ ಬಹುಮಾನ ಇನ್ನೊಂದಿಲ್ಲ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಮಾಜದ ಎಲ್ಲ ವಿಚಾರಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಲಭಿಸುತ್ತದೆ. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಶಿಕ್ಷಣದ ಮೂಲಕ ಸಜ್ಜನ ನಾಗರಿಕನ್ನಾಗಿ ಮಾಡುವ ಕೆಲಸ ಸಮುದಾಯದಿಂದ ನಡೆಯುತ್ತಿದ್ದು, ಈ ಕಾರ್ಯ ಇನ್ನಷ್ಟು ಮುಂದುವರಿಯಲಿ ಎಂದರು.ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯದ ಸೇವೆಯನ್ನು ನೀಡುವ ಮೂಲಕ ಸ್ವಾಸ್ಥ್ಯಯುತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿರುವ ಕ್ರೈಸ್ತ ಸಮುದಾಯದ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಣ ಸಂಸ್ಥೆಗಳ ಕುರಿತು ಇರುವ ಯಾವುದೇ ರೀತಿಯ ಕೆಲಸಗಳನ್ನು ಮಾಡಿಕೊಡುವ ಕೆಲಸದಲ್ಲಿ ತಾನು ಪ್ರಾಮಾಣಿಕವಾಗಿ ಮಾಡಲು ಸಿದ್ಧನಿರುವುದಾಗಿ ಹೇಳಿದರು.ಇದೇ ವೇಳೆ ನೂತನವಾಗಿ ಚುನಾಯಿತರಾದ ಜನಪ್ರತಿನಿಧಿಗಳಿಗೆ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೇಲಿಯೊ ವಹಿಸಿದ್ದರು.ಮೈಸೂರು ಸೋಪ್ಸ್ ಆ್ಯಂಡ್ ಡಿಟರ್ಜೆಂಟ್‌ನ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜೆರಾಲ್ಡ್ ಫರ್ನಾಂಡಿಸ್ ಅಭಿನಂದನಾ ನುಡಿಗಳನ್ನಾಡಿದರು.ಕೆಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷೆ ಮೇರಿ ಡಿಸೋಜ, ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ. ಡಿಮೆಲ್ಲೊ ಉಪಸ್ಥಿತರಿದ್ದರು. ಕೇಂದ್ರಿಯಸಮಿತಿಯ ರಾಜಕೀಯ ಸಂಚಾಲಕ ಎಲ್ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಎಡ್ವರ್ಡ್ ಲಾರ್ಸನ್ ಕಾರ್ಯಕ್ರಮ ನಿರೂಪಿಸಿದರು..........ಶಾಲೆಗಳಲ್ಲಿ ಅಗತ್ಯವಿರುವ ಶಿಕ್ಷಕರನ್ನೂ ನೇಮಿಸಿ
ಸರ್ಕಾರಗಳು ಇಂದು ಮಕ್ಕಳ ಕಲಿಕೆಗಾಗಿ ಹಾಲು, ಮೊಟ್ಟೆ, ಪುಸ್ತಕ, ಸಮವಸ್ತ್ರ ಎಲ್ಲವನ್ನೂ ಒದಗಿಸುತ್ತದೆ. ಆದರೆ ಅದೇ ಮಕ್ಕಳ ಬೋಧನೆಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತವೆ. ಮಕ್ಕಳಿಗೆ ಎಲ್ಲ ಸೌಲಭ್ಯಗಳ ಜೊತೆಯಲ್ಲಿ ಉತ್ತಮ ಶಿಕ್ಷಕರು ಇಲ್ಲದೆ ಹೋದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಅಲ್ಲದೆ ಸರ್ಕಾರಗಳು ನಿಯಮಾವಳಿಗಳ ಹೆಸರಿನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮೇಲೆ ಹೇರಿಕೆ ಮಾಡುವುದರ ಕುರಿತು ಕೂಡ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ಧರ್ಮಾಧ್ಯಕ್ಷರು ಕಿವಿಮಾತು ಹೇಳಿದರು.