ವೈದ್ಯರಿಗಿಂತ ದಾದಿಯರು, ತಂತ್ರಜ್ಞರ ಸೇವೆ ದೊಡ್ಡದು: ಡಾ.ಪೂರ್ಣಿಮಾ

KannadaprabhaNewsNetwork | Published : Jul 11, 2024 1:31 AM

ಸಾರಾಂಶ

ದಾದಿಯರ ವೃತ್ತಿಯಲ್ಲಿ ಅಗತ್ಯವಾದ ಸಮರ್ಪಣಾ ಭಾವ, ಸಹಾನುಭೂತಿ, ಮಾನವೀಯತೆ, ಸೇವಾ ಮನೋಭಾವ ಇರಬೇಕು. ಸಹನೆ, ಕರುಣೆ, ತಾಳ್ಮೆ, ಭಾವನಾತ್ಮಕವಾಗಿರುವ ಸ್ಥಿರತೆ, ಶಿಸ್ತು, ಸಮಗ್ರತೆ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದು ಅಗತ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ಎಲ್ಲವನ್ನೂ ಮಾಡಲಾಗದು. ಅದರಲ್ಲಿ ದಾದಿಯರು ಮತ್ತು ತಂತ್ರಜ್ಞರ ಕೊಡುಗೆ ಹೆಚ್ಚಾಗಿದೆ. ವೃತ್ತಿ ಬದುಕಿನಲ್ಲಿ ಸೇವಾ ಕಾರ್ಯವನ್ನು ಮೈಗೂಡಿಸಿಕೊಂಡಾಗ ಮಾತ್ರ ಸಫಲತೆ ಕಾಣಲು ಸಾಧ್ಯ ಎಂದು ಮಿಮ್ಸ್‌ನ ಸ್ತ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಅಭಿಪ್ರಾಯಿಸಿದರು.

ನಗರದ ಗಾಂಧಿ ಭವನದಲ್ಲಿ ಬಿಎಲ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸೈನ್ಸ್ ವಿಭಾಗದಿಂದ ನಡೆದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ದಾದಿಯರ ವೃತ್ತಿಯಲ್ಲಿ ಅಗತ್ಯವಾದ ಸಮರ್ಪಣಾ ಭಾವ, ಸಹಾನುಭೂತಿ, ಮಾನವೀಯತೆ, ಸೇವಾ ಮನೋಭಾವ ಇರಬೇಕು. ಸಹನೆ, ಕರುಣೆ, ತಾಳ್ಮೆ, ಭಾವನಾತ್ಮಕವಾಗಿರುವ ಸ್ಥಿರತೆ, ಶಿಸ್ತು, ಸಮಗ್ರತೆ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಉತ್ತಮ ಸಂಪರ್ಕ, ಚುರುಕುತನ, ಧೈರ್ಯ, ಏಕಾಗ್ರತೆ, ಹೊಂದಾಣಿಕೆ, ಆತ್ಮವಿಶ್ವಾಸ, ಆತ್ಮಸಾಕ್ಷಿ ಇದ್ದರೆ ಎಂತಹ ಸಂದರ್ಭ ಬಂದರೂ ಅದನ್ನು ಸುಲಭವಾಗಿ ಎದುರಿಸಬಹುದು ಎಂದರು.

ನೋವಲ್ಲಿ ಧೈರ್ಯ ತುಂಬುವ ಕೈಗಳು, ಕಷ್ಟದಲ್ಲಿ ಸಹಾಯಾಸ್ತ ನೀಡುವುದು ದಾದಿಯರು ಮಾತ್ರ. ಅವರು ತ್ಯಾಗ, ಧೈರ್ಯ, ವಿಶ್ರಾಂತಿ ರಹಿತ ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತಾರೆ ಎಲೆಮರೆಕಾಯಿಯಂತೆ ಸೇವೆ ಮಾಡುತ್ತಿದ್ದರೂ ನಿಮ್ಮ ಕಾರ್ಯವನ್ನು ನೆನೆಯುವ ಕಾಲವೂ ಬರುತ್ತದೆ ಎಂದರು.

ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್. ಆಶಾಲತಾ, ಡಾ.ಕೃಷ್ಣಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.ನಾಡಿದ್ದು ಉಚಿತ ಚಿಕಿತ್ಸೆ, ಔಷಧಿ ವಿತರಣೆ

ಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಯ ಪಟ್ಟಣ ಹಾಗೂ ಹೊಸಹೊಳಲು ಗ್ರಾಮದ ಹಿರಿಯ ನಾಗರೀಕರಿಗೆ ಜುಲೈ13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೊಸಹೊಳಲು ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗೆ ಉಚಿತವಾಗಿ ಸಮಾಲೋಚನೆ ಚಿಕಿತ್ಸೆ ಹಾಗೂ ಔಷಧಿ ವಿತರಿಸಲಾಗುತ್ತದೆ. ಕೆ.ಅರ್.ಪೇಟೆ ಹಾಗೂ ಹೊಸಹೊಳಲು ಹಿರಿಯ ನಾಗರೀಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಡಾ.ಲೋಕೇಶ್ ತಿಳಿಸಿದ್ದಾರೆ.

15ರಂದು ಉದ್ಯೋಗ ಮೇಳ

ಮಂಡ್ಯ:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಕೌಶಲ್ಯ ದಿನ ಹಾಗೂ ದಿ.ಕೆ.ವಿ.ಶಂಕರೇಗೌಡರ ಜನ್ಮದಿನದ ಅಂಗವಾಗಿ ಜುಲೈ 15ರಂದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಜಿಲ್ಲೆಯ ಸ್ಥಳೀಯ ಹಾಗೂ ಮೈಸೂರು ಮತ್ತು ಬೆಂಗಳೂರಿನ 30ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ (ಯಾವುದೇ ಟ್ರೇಡ್), ಡಿಪ್ಲಮೋ (ಯಾವುದೇ ಟ್ರೇಡ್) ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 35 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಹಾಜರಾಗಿ ಉದ್ಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295124 ಮತ್ತು ಮೊ-8660061488, 9164642684, 8970646629 ನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Share this article