ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಂದು ಶಿಕ್ಷಣ ವಾಣಿಜ್ಯೋದ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ ಕಾಲಘಟ್ಟದಲ್ಲಿ, ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಮ್ಮ ಶಾಲೆ ಶ್ಲಾಘನೀಯ ಎಂದು ನ್ಯಾಯವಾದಿ ಕೆ.ಎಸ್ ಲೋಕೇಶ್ ಕುಮಾರ್ ಅಭಿಪ್ರಾಯಪಟ್ಟರು.ಅವರು ನಗರದ ಪರಮೇಶ್ವರಪ್ಪ ಕಲ್ಯಾಣ ಮಂದಿರದಲ್ಲಿ ನಗರದ ಪಾರ್ವತಮ್ಮ ಪ್ರಾಥಮಿಕ ಶಾಲೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪೋಷಕ ಸಮುದಾಯವನ್ನು ತನ್ನ ತಾಯಿ ಶಾಲೆ ಸೆಡೆಯುತ್ತಿದೆ. ನಮ್ಮ ಅಣ್ಣನ ಮಗಳು ಎಲ್ಲಿಯೇ ವ್ಯಾಸಂಗ ಮಾಡಿ ಇಂದು ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಂಜಿನಿಯರಿಂಗ್ ಮುಗಿಸಿ ನೌಕರಿ ಪಡೆದಿದ್ದಾಳೆ. ಇದೇ ರೀತಿ ಅನೇಕ ಮಕ್ಕಳು ಈ ಶಾಲೆಯಿಂದ ಪ್ರತಿಭಾವಂತರಾಗಿ ಹೊರಹೊಮ್ಮಿದ್ದಾರೆ ಎಂದರು.
ಹೊಯ್ಸಳೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪೂರ್ಣಿಮಾ ಮಾತನಾಡಿ, ಮಕ್ಕಳು ಇಷ್ಟಪಟ್ಟು ಓದಬೇಕು ತರಗತಿಯಲ್ಲಿ ಖುಷಿಯಿಂದ ಇರಬೇಕು. ಪೂರ್ವ ಪ್ರಾಥಮಿಕ ಶಾಲೆಗೆ ಬರುವ ಸಣ್ಣ ಮಕ್ಕಳಿಗೆ ಶಾಲೆ ಎಂಬುದು ಹೊಸ ಅನುಭವವಾಗಿರುತ್ತದೆ. ಮನೆಯ ವಾತಾವರಣವನ್ನು ತರಗತಿಯಲ್ಲಿ ಸೃಷ್ಟಿಸಬೇಕಾಗುತ್ತದೆ. ಆ ವಾತಾವರಣ ಇಲ್ಲಿ ಇದೆ. ಅವುಗಳ ಮನವರಿತು ಆಟದಲ್ಲಿ ಪಾಠವನ್ನು ಬೋಧಿಸುವಂಥ ನೈಪುಣ್ಯತೆ ಶಿಕ್ಷಕರಲ್ಲಿ ಇರಬೇಕು. ಆ ನೈಪುಣ್ಯತೆಯನ್ನು ಇಲ್ಲಿಯ ಶಿಕ್ಷಕರು ಹೊಂದಿದ್ದಾರೆ. ಮುಖ್ಯ ಶಿಕ್ಷಕಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಅವರು ಮಕ್ಕಳಿಗೆ ಕಥೆ ಹೇಳುವ ಮೂಲಕ ಮಕ್ಕಳನ್ನು ತಮ್ಮತ್ತ ಆಕರ್ಷಿಸಿಕೊಂಡು, ಕಲಿಕೆಯ ಮುಖ್ಯ ವಾಹಿನಿಗೆ ತರುವಂತಹ ಕೌಶಲ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ.ಪೋಷಕರು ಮಗು ಮನೆಯಲ್ಲಿ ಏನು ಬರೆಯುವುದಿಲ್ಲ, ಓದುವುದಿಲ್ಲ ಎಂದು ಹೇಳಿದರೆ ಆ ಚಿಂತೆ ಬಿಡಿ ಅವರು ಇವತ್ತಲ್ಲ ನಾಳೆ ಬರೆಯುತ್ತಾರೆ. ಮಕ್ಕಳ ಮೇಲೆ ಒತ್ತಡವನ್ನು ಖಂಡಿತ ಹಾಕಬೇಡಿ. ನಿಮ್ಮ ಮಗು ಚೆನ್ನಾಗಿ ಓದುತ್ತದೆ ನಮಗೆ ಸ್ಪಂದಿಸುತ್ತಿದೆ ಎಂದು ಹೇಳಿ ಕಳುಹಿಸುತ್ತಾರೆ. ಅದರಂತೆ ಮಕ್ಕಳು ಸಹ ಜಾಣರಾಗಿ ಹೊರಬರುತ್ತಿದ್ದಾರೆ. ಇಲ್ಲಿಯ ಶಿಕ್ಷಕ ವರ್ಗವು ಮಕ್ಕಳ ಕಲಿಕೆ ಮತ್ತು ಇತರೆ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಕೊಟ್ರಯ್ಯ ಶಾಲೆ ಪ್ರಾರಂಭವಾಗಿ 30 ವರ್ಷಗಳು ಸಂದಿವೆ. ಕೊರೋನಾ ಸಮಯದ ಎರಡು ವರ್ಷಗಳನ್ನು ಹೊರತುಪಡಿಸಿದರೆ 28 ವರ್ಷಗಳ ಕಾಲ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲೀಷ್, ಹಿಂದಿಯನ್ನು ಇಲ್ಲಿ ಕಲಿಸಲಾಗುತ್ತಿದೆ, ಸೇವಾ ಮನೋಭಾವನೆಲ್ಲಿ ನಡೆಯುತ್ತಿದೆ ಎಂದರು. ಶಾಲಾ ವಾರ್ಷಿಕ ವರದಿಯನ್ನು ನೀಡಿದ ಮುಖ್ಯ ಶಿಕ್ಷಕಿ ಮಂಜುಳ, ಪೋಷಕರ ಸ್ಪಂದನೆ ನಮ್ಮಗಳಿಗೆ ಸ್ಫೂರ್ತಿ, ಶಾಲೆಯಿಂದ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದು ಅವರ ಬಯಸಿದರು.ಪೋಷಕರುಗಳಾದ ಮಮತಾ, ವೆಂಕಟೇಶ್, ಕಾವ್ಯ ಅವರು ಶಾಲೆ ನೀಡುವ ಗುಣಮಟ್ಟದ ಶಿಕ್ಷಣದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ರಶ್ಮಿ ನಿರ್ವಹಿಸಿದರು. ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನ ಗೆದ್ದಿತು.