ಭೂತಾಯಿಗೆ ರೈತರಿಂದ ಎಳ್ಳು ಅಮಾವಾಸ್ಯೆಯ ವಿಶೇಷ ಪೂಜೆ

KannadaprabhaNewsNetwork |  
Published : Dec 31, 2024, 01:01 AM IST
೩೦ವೈಎಲ್‌ಬಿ೧:ಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಸೋಮವಾರ ರೈತ ಕುಟುಂಬದವರು ತಂತಮ್ಮ ಹೊಲಗಳಿಗೆ ತೆರಳಿ ಬೆಳೆದು ನಿಂತ ಪೈರುಗಳಿಗೆ ಪೂಜೆ ಸಲ್ಲಿಸಿ ಎಳ್ಳು ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು. | Kannada Prabha

ಸಾರಾಂಶ

ಒಡಲು ತುಂಬಿಕೊಂಡು ಭೂತಾಯಿ, ಪೈರಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ರೈತ ಕುಟುಂಬದವರು ಎಳ್ಳು ಅಮಾವಾಸ್ಯೆಯನ್ನು ರೈತರು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಒಡಲು ತುಂಬಿಕೊಂಡು ಭೂತಾಯಿ, ಪೈರಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ರೈತ ಕುಟುಂಬದವರು ಎಳ್ಳು ಅಮಾವಾಸ್ಯೆಯನ್ನು ರೈತರು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು.

ಉತ್ತರ ಕರ್ನಾಟಕದ ಸುಪ್ರಸಿದ್ಧ ಹಬ್ಬಗಳಲ್ಲೊಂದಾದ ಚರಗಾ ಚೆಲ್ಲುವುದು ಎಂದರೆ ರೈತರಿಗೆ ಎಲ್ಲಿಲ್ಲಿದ ಸಂಭ್ರಮ. ವರ್ಷಕ್ಕೊಮ್ಮೆ ಆಚರಿಸುವ ಈ ಹಬ್ಬದಲ್ಲಿ ರೈತರು ಟ್ರ್ಯಾಕ್ಟರ್, ಟಾಟಾ ಎಸಿ, ಟಂಟ, ಎತ್ತು ಬಂಡಿಗಳಿಗೆ ಸಿಂಗರಿಸಿಕೊಂಡು ನಾ ಮುಂದೆ ತಾ ಮುಂದೆ ಎಂದು ತಮ್ಮ ಹೊಲಗಳಿಗೆ ಅತ್ಯಂತ ಉತ್ಸಾಹದಿಂದ ತೆರುಳುತ್ತಾರೆ. ಹೊಲದಲ್ಲಿ ೨ ಕಲ್ಲುಗಳನ್ನು ಪ್ರತಿಷ್ಠಾಪಿಸಿ ಅದನ್ನು ಭೂದೇವಿ ಎಂದು ನಾಮಕರಣ ಮಾಡಿ ಪೂಜಿಸುವ ಮೂಲಕ ಭೂಮಿ ತಾಯಿ ತನ್ನ ಒಡಲಾಳದಲ್ಲಿ ಪೈರುಗಳನ್ನು ತುಂಬಿಕೊಂಡಿರುತ್ತಾಳೆ. ಈ ಪೂಜೆ ಸಿಮಂತ ಮಾಡಿದಂತೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಎಳ್ಳನಿಂದಲೇ ತಯಾರಿಸಿದ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನು ಈ ಸಂದರ್ಭ ದೇವರಿಗೆ ಸಮರ್ಪಿಸಲಾಗುತ್ತದೆ. ರುಚಿ ರುಚಿಯಾದ ಭೋಜನ ತಯಾರಿಸಿ ಎಡೆ ಮಾಡುತ್ತಾರೆ. ಆ ನಂತರ ಪಂಕ್ತಿಯಲ್ಲಿ ಕುಳಿತು ಊಟ ಮಾಡುವುದು ವಾಡಿಕೆ. ಪೂಜೆಯ ಸಂದರ್ಭ ಕಡಲೆ, ಬಿಳಿಜೋಳ, ಗೋದಿ, ಕುಸಬಿ ಮತ್ತಿತರ ಬೆಳೆಗಳಿಂದ ಪೂಜಾ ಸ್ಥಳವನ್ನು ಶೃಂಗರಿಸಲಾಗುತ್ತದೆ. ವಿಶೇಷ ಎಳ್ಳು ಹೋಳಿಗೆ, ಎಳ್ಳಿನ ಚಟ್ನಿ, ಸಜ್ಜೆ ರೊಟ್ಟಿ ಎಣೆ ಬದನೆಕಾಯಿ ಪಲ್ಲೆ, ಶೇಂಗಾ ಹೋಳಿಗೆ, ಚಪಾತಿ, ಕೆನೆಮೊಸರು ಮತ್ತಿತರ ಪದಾರ್ಥಗಳನ್ನು ಬಳಸಲಾಗುತ್ತದೆ. ಊಟ ಮಾಡಿದ ತರುವಾಯ ಎಡೆ ಹಾಗೂ ಭೋಜನ ಪದಾರ್ಥಗಳನ್ನೆಲ್ಲ ಒಟ್ಟಿಗೆ ಸೇರಿಸಿ ಹೊಲದ ಸುತ್ತಲೂ ಸಿಂಪಡಿಸಲಾಗುತ್ತದೆ. ಚರಗಾ ಚೆಲ್ಲುವುದು ಎಂದು ಕರೆಯುವ ಈ ಪದ್ದತಿ ನೆರವೇರಿಸುವ ಸಂದರ್ಭದ ಹುಲಿಗ್ಯ......ಹುಲಿಗ್ಯ ಚಳಂಬ್ರಿಗೊ ಎಂದು ಉಚ್ಚರಿಸುವುದು ವಾಡಿಕೆ. ಒಟ್ಟಿನಲ್ಲಿ ಸುಗ್ಗಿಯ ಹಿಗ್ಗು ಬಿಂಬಿಸುವ ಈ ಆಚರಣೆಯನ್ನು ರೈತರು ಇಂತಹ ಸಂಕಷ್ಟದಲ್ಲಿಯೂ ತಪ್ಪದೇ ಸಂಭ್ರಮದಿಂದ ಆಚರಿಸುತ್ತಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ