ತೈಲಬೆಲೆ ಇಳಿಸುವ ವರೆಗೆ ಅಧಿವೇಶನಕ್ಕೆ ಅವಕಾಶ ನೀಡುವುದಿಲ್ಲ: ಸುನಿಲ್ ಕುಮಾರ್

KannadaprabhaNewsNetwork | Published : Jun 18, 2024 12:53 AM

ಸಾರಾಂಶ

ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧ ಪ್ರತಿಭಟನೆ - ರಸ್ತೆತಡೆ ನಡೆಯಿತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯನ್ನು ಹಿಂಪಡೆಯು ವರೆಗೆ ವಿಧಾನಸಭೆ ಅಧಿವೇಶನವನ್ನು ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾರ್ಕಳ ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅವರು ಸೋಮವಾರ, ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧ ಪ್ರತಿಭಟನೆ - ರಸ್ತೆತಡೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಪ್ರದರ್ಶಿಸಿದಿರಿ, ಈಗ ನೀವೇ ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಕೈಗೆ ಚೊಂಬು ಕೊಟ್ಟಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸುನಿಲ್ ಕುಮಾರ್, ಬೆಲ ಏರಿಕೆ ಮಾಡಿ ಉಳಿದ ರಾಜ್ಯಗಳಿಗೆ ಸರಿಸಮಾನವಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆಏರಿಕೆ ಮಾಡಿ ಜನರಿಗೆ ತೊಂದರೆ ಕೊಡುವುದರಲ್ಲಿಯೂ ಸಮಾನತೆ ಹುಡುಕುವುದು ನಾಚಿಕೆಗೇಡಿನ ಸಂಗತಿ ಎಂದರು.

ರಾಜ್ಯದಲ್ಲಿ ಪ್ರಪ್ರಥಮ ಬಾರಿ 72 ಜನರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಅವರ ಟಿಎ, ಡಿಎ, ಪೆಟ್ರೋಲ್ ಖರ್ಚು ಕೊಡುವುದಕ್ಕಾಗಿ ಸರ್ಕಾರ ಈ ದರ ಏರಿಕೆ ಮಾಡಿದೆ. 5 ವರ್ಷಗಳ ಕಾಲ ಜನರಿಗೆ ಉಚಿತ ಗ್ಯಾರಂಟಿಗಳನ್ನೂ ನೀಡಬೇಕು, ಅಭಿವೃದ್ಧಿಗೂ ಹಣ ನೀಡಬೇಕು, ಸರ್ಕಾರಕ್ಕೆ ಇನ್ನು ಯಾವುದೇ ತೆರಿಗೆ ಹಾಕಲು ಬಾಕಿ ಇಲ್ಲ. ಆದ್ದರಿಂದ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಿಸಿದೆ, ಇದನ್ನು ಒಪ್ಪಿಕೊಳ‍್ಳಿ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಬಿಜೆಪಿ ಪಕ್ಷದವರ ಬಳಿ ಮಾತ್ರ ಕಾರು, ಬೈಕ್ ಇರುವುದಲ್ಲ. ಜನಸಾಮಾನ್ಯರ ಬಳಿಯೂ ಇದೆ. ಹೀಗಾಗಿ ರಾಜ್ಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ಜನಸಾಮಾನ್ಯರ ಧ್ವನಿಯಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಪತ್ರಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಜಿ.ಪ್ರ.ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ, ರೇಶ್ಮಾ ಯು.ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಮುಖಂಡರಾದ ದಿನಕರ್ ಬಾಬು, ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಬಿಲ್ಲಾಡಿ ಪೃಥ್ವಿರಾಜ್, ಜಿ.ಪ್ರ. ಕಾರ್ಯದರ್ಶಿ ಶಶಾಂತ್ ಶಿವತ್ತಾಯ ಮೊದಲಾದವರು ಉಪಸ್ಥಿತರಿದ್ದರು.ಯುಪಿ 94, ಗುಜರಾತ್ 95, ಹರ್ಯಾಣ 94...

ಬೇರೆ ರಾಜ್ಯಗಳಲ್ಲಿಯೂ ಪೆಟ್ರೋಲ್ ಬೆಲೆ ನಮಗಿಂತ ಹೆಚ್ಚಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ಇರುವ ತೆಲಂಗಾಣದಲ್ಲಿ ಪೆಟ್ರೋಲ್ ಬೆಲೆ 107 ರು. ಇದೆ, ಆದರೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ 94 ರು., ಗುಜರಾತ್‌ನಲ್ಲಿ 95 ರು., ಹರಿಯಾಣದಲ್ಲಿ 94 ರು. ಇದೆ. ಇದು ನಮ್ಮ ರಾಜ್ಯ ಸರ್ಕಾರಕ್ಕೆ ಮಾದರಿಯಾಗಬೇಕಾಗಿತ್ತು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿಲ್ಲ

ಬೆಲೆ ಏರಿಕೆಯ ವಿರುದ್ಧ ಸಿಟಿ ಬಸ್ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೂಲಕ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಅನುಮತಿಯನ್ನೇ ನೀಡಿಲ್ಲ. ಹೀಗಾಗಿ ಪಕ್ಷದ ಕಚೇರಿಯ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.

Share this article