ನಿವೃತ್ತರ ಕನಿಷ್ಠ ಪಿಂಚಣಿ ₹7500 ನಿಗದಿಪಡಿಸಿ: ನಿವೃತ್ತ ಪಿಂಚಣಿದಾರರ ಸಂಘ

KannadaprabhaNewsNetwork | Published : Mar 30, 2025 3:05 AM

ಸಾರಾಂಶ

ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಯು ನಿವೃತ್ತ ಪಿಂಚಣಿದಾರರ ಸಮಸ್ಯೆ ಪರಿಹರಿಸಿ, ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಆಂದೋಲನಾ ಸಮಿತಿ, ಇಪಿಎಸ್‌ 95 ನಿವೃತ್ತ ಪಿಂಚಣಿದಾರರ ಸಂಘದಿಂದ ನಗರದ ಇಪಿಎಫ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಸರ್ಕಾರಕ್ಕೆ ಇಪಿಎಸ್‌ 95 ಮುಖಂಡರ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಯು ನಿವೃತ್ತ ಪಿಂಚಣಿದಾರರ ಸಮಸ್ಯೆ ಪರಿಹರಿಸಿ, ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಆಂದೋಲನಾ ಸಮಿತಿ, ಇಪಿಎಸ್‌ 95 ನಿವೃತ್ತ ಪಿಂಚಣಿದಾರರ ಸಂಘದಿಂದ ನಗರದ ಇಪಿಎಫ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಕೆ.ಬಿ. ಬಡಾವಣೆಯ ವರದಿಗಾರರ ಕೂಟದ ಮುಂಭಾಗದ ಇಪಿಎಫ್ ಕಚೇರಿ ಎದುರು ಧರಣಿ ನಡೆಸಿದ ಪಿಂಚಣಿದಾರರು, ಕಚೇರಿ ಸ್ಥಳೀಯ ಅಧಿಕಾರಿ ಮುಖಾಂತರ ಪ್ರಧಾನಿ, ಕೇಂದ್ರ ಕಾರ್ಮಿಕ ಸಚಿವರು, ಭವಿಷ್ಯ ನಿಧಿ ಮುಖ್ಯ ಆಯುಕ್ತರಿಗೆ ಮನವಿ ಅರ್ಪಿಸಿದರು.

ಸಂಘದ ಅಧ್ಯಕ್ಷ ಕೆ.ಎಂ.ಮರುಳಸಿದ್ದಯ್ಯ ಮಾತನಾಡಿ, ರಾಷ್ಟ್ರೀಯ ಆಂದೋಲನಾ ಸಮಿತಿ, ಇಪಿಎಸ್‌ 95 ನಿವೃತ್ತ ಪಿಂಚಣಿದಾರರ ಸಂಘವು ಪಿಂಚಣಿದಾರರ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ಹೋರಾಡುತ್ತಾ ದಶಕಗಳೇ ಕಳೆದಿವೆ. ಆದರೆ, ಈವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಇದು ಅತ್ಯಂತ ಶೋಚನೀಯ ಸಂಗತಿ. ನಮ್ಮ ಬೇಡಿಕೆಗಳಾದ ಕನಿಷ್ಠ ಪಿಂಚಣಿ 7500 ಸೇರಿದಂತೆ ಡಿಎ ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣ ವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ ಪಿಂಚಣಿ ₹5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದರು.

ದೇಶಾದ್ಯಂತ 1700 ಕಂಪನಿಗಳಿದ್ದು, ಅವುಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕಾರ್ಖಾನೆಗಳು ಇವೆ. ಲಕ್ಷಾಂತರ ನಿವೃತ್ತ ನೌಕರರು ತಮ್ಮ ಬದುಕಿಗಾಗಿ ಹೋರಾಟದ ಪ್ರಯತ್ನ ನಡೆಸಿದರೂ ಯಶಸ್ಸು ಮಾತ್ರ ಮರೀಚಿಕೆಯಾಗಿದೆ. ದುರಾದೃಷ್ಟವೋ ಎನ್ನುವಂತೆ ಅಮಾಯಕ ಜೀವಿಗಳು ಇಳಿ ವಯಸ್ಸಿನಲ್ಲಿ ಅದೆಷ್ಟೋ ಪಿಂಚಣಿ ವಂಚಿತರು ನೆಲೆ ಕಾಣದೇ ಕಮರಿಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಗೆ ಅನೇಕ ಬಾರಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಪ್ರತಿಭಟನೆ, ಹೋರಾಟ, ಸರದಿ ಉಪವಾಸ ಸತ್ಯಾಗ್ರಹ ಮಾಡಿ, ಮನವಿ ಪತ್ರಗಳನ್ನು ನಿರಂತರ ಸಲ್ಲಿಸುತ್ತಿದ್ದೇವೆ. ಕೇಂದ್ರ ಮತ್ತು ಪಿಂಚಣಿ ಇಲಾಖೆ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿವೆ ಮುಷ್ಕರ ಕೈಬಿಡುವಂತೆ ತಿಳಿಸುತ್ತವೆ. ಆದರೆ, ಈವವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದರು.

ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಪುಟಗನಾಳು, ಉಪಾಧ್ಯಕ್ಷರಾದ ಗಂಗಾಧರ, ಚನ್ನಬಸಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನ ತಂಗಡಗಿ, ಖಜಾಂಚಿ ಡಿ.ಎಚ್. ಶೆಟ್ಟರ್, ಸಂಯೋಜಕ ಎಂ.ಶಾಂತಪ್ಪ, ನಿವೃತ್ತ ಪಿಂಚಿಣಿದಾರರು ಇದ್ದರು.

Share this article