ರಾಜ್ಯದಲ್ಲಿ ವನ್ಯಜೀವಿ ಅನುವಂಶಿಕ ಲ್ಯಾಬ್‌ ಸ್ಥಾಪಿಸಿ: ಸಂಜಯ್‌ ಗುಬ್ಬಿ

KannadaprabhaNewsNetwork | Updated : Mar 08 2024, 12:44 PM IST

ಸಾರಾಂಶ

ಮಾವನ ಮತ್ತು ವನ್ಯ ಜೀವಿ ಸಂಘರ್ಷದ ವೇಳೆ ನಿದಿಷ್ಠ ಪ್ರಾಣಿಯ ಗುರುತಿಗಾಗಿ ಪರೀಕ್ಷೆ ನಡೆಸಲು ಲ್ಯಾಬ್‌ ಆರಂಭಿಸುವಂತೆ ಸಂಜಯ್‌ ಗುಬ್ಬಿ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವನ್ಯಜೀವಿ-ಮಾನವ ಸಂಘರ್ಷದಂತಹ ಸಂದರ್ಭದಲ್ಲಿ ತಪ್ಪು ಪ್ರಾಣಿಯನ್ನು ಸೆರೆ ಹಿಡಿಯುವುದನ್ನು ತಪ್ಪಿಸಲು ರಾಜ್ಯದಲ್ಲಿ ಅನುವಂಶಿಕ (ಜೆನೆಟಿಕ್ಸ್‌) ಪ್ರಯೋಗಾಲಯ ಸ್ಥಾಪಿಸುವಂತೆ ವನ್ಯಜೀವಿ ತಜ್ಞ ಡಾ। ಸಂಜಯ್‌ ಗುಬ್ಬಿ ಅವರು ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.

ವನ್ಯಜೀವಿ-ಮಾನವ ಸಂಘರ್ಷದಂತಹ ಸಂದರ್ಭದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಆಧರಿಸಿ ನಿರ್ಧಿಷ್ಟ ಪ್ರಾಣಿಗಳ ಗುರುತಿಸಲು ಪ್ರಯತ್ನಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಮಾನವನ ಸಾವಿಗೆ ಮತ್ತು ಗಾಯಕ್ಕೆ ಕಾರಣವಾದ ಪ್ರಾಣಿ ಹಾಗೂ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಾಣಿಸುವ ಪ್ರಾಣಿಯೇ ಬೇರೆಯಾಗಿರುತ್ತದೆ. 

ಹಾಗಾದಾಗ, ದಾಳಿ ಮಾಡಿದ ಪ್ರಾಣಿಯ ಬದಲು ಬೇರೆ ಪ್ರಾಣಿ ಸೆರೆ ಹಿಡಿಯುವಂತಾಗುತ್ತದೆ. ಈ ಗೊಂದಲವನ್ನು ನಿವಾರಿಸಲು ಕ್ಯಾಮೆರಾ ಟ್ರ್ಯಾಪ್‌ ಜತೆಗೆ ಪ್ರಾಣಿಯ ಅನುವಂಶಿಕ ಮಾದರಿಯನ್ನು ಸಂಗ್ರಹಿಸಿ ದಾಳಿ ಮಾಡಿದ ಪ್ರಾಣಿಯ ನಿಖರ ಪತ್ತೆ ಮಾಡಬಹುದಾಗಿದೆ.

ಸದ್ಯ ಪ್ರಾಣಿಯ ಅನುವಂಶಿಕ ಮಾದರಿಯನ್ನು ಡೆಹರಾಡೂನ್‌ ಅಥವಾ ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ಅದರಿಂದ ಮಾದರಿಯ ಫಲಿತಾಂಶ ಬರುವುದು ವಿಳಂಬವಾಗುತ್ತಿದೆ.

 ಹೀಗಾಗಿ ಅರಣ್ಯ ಇಲಾಖೆಯಿಂದ ರಾಜ್ಯದಲ್ಲಿಯೇ ಅನುವಂಶಿಕ ಪ್ರಯೋಗಾಲಯ ಸ್ಥಾಪಿಸಬೇಕಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Share this article