ಬಸವರಾಜ ಹಿರೇಮಠ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಸರಿನಲ್ಲಿ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಚಟುವಟಿಕೆ ಯಾದವಾಡ-ಪುಡಕಲಕಟ್ಟಿ-ಕರಡಿಗುಡ್ಡ ಗ್ರಾಮಗಳ ಗಡಿ (ಇರಕಾಳು)ಯಲ್ಲಿ ತಲೆ ಎತ್ತಲು ಹವನಿಸುತ್ತಿದೆ.
ಆದರೆ, ಕಾರ್ಖಾನೆಯ ಕಾಲಂ ಪೂಜೆಗೆ ಆಗಮಿಸಿದ್ದ ಸಚಿವೆ ಹೆಬ್ಬಾಳಕರ, ಪುತ್ರ ಮೃಣಾಲ ವಿರುದ್ಧ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಹತ್ತು-ಹಲವು ಸವಾಲುಗಳ ಮಧ್ಯೆ ಇರಕಾಳಿನ ಪ್ರದೇಶದಲ್ಲಿ ಈ ಕಾರ್ಖಾನೆ ಮೊಳಕೆಯೊಡೆಯಲಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.ಹೋರಾಟಕ್ಕೆ ಕಾರಣ?: ಈ ಭಾಗದಲ್ಲಿ ಕಾರ್ಖಾನೆಯೊಂದು ಶುರುವಾದರೆ ಉದ್ಯೋಗ ಸೃಷ್ಟಿ, ವ್ಯಾಪಾರ-ವಹಿವಾಟು, ಸುತ್ತಲಿನ ಪ್ರದೇಶದ ಭೂಮಿ ಮೌಲ್ಯ ಏರಿಕೆ, ರೈತರ ಆದಾಯ ದ್ವಿಗುಣ ಸೇರಿದಂತೆ ಹಲವು ಅನುಕೂಲತೆ ಇದ್ದು, ಕಾರ್ಖಾನೆ ಬರುತ್ತಿರುವ ಹಿನ್ನೆಲೆಯಲ್ಲಿ ಖುಷಿ ಪಡಬೇಕಾದ ಜನತೆ ಅದರಲ್ಲೂ ಸ್ಥಳೀಯರು ಈ ಕಾರ್ಖಾನೆಯ ಸ್ಥಾಪನೆ ವಿರೋಧಿಸಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕೆ ಕಾರಣ ಇಲ್ಲದೇನಿಲ್ಲ!
ಕಲಘಟಗಿ, ಅಳ್ನಾವರದಲ್ಲಿ ಬೆಳೆಯುವ ಕಬ್ಬು 30-50 ಕಿಮೀ ವ್ಯಾಪ್ತಿಯಲ್ಲಿರುವ ಹಳಿಯಾಳದ ಪ್ಯಾರಿ ಶುಗರ್ಸ್, ಕೋಣನಕೆರೆ ವಿಐಎನ್ ಶುಗರ್ಸ್, ಬೆಳವಡಿಯ ಸೋಮೇಶ್ವರ ಶುಗರ್ಸ್, ಸವದತ್ತಿ ಬಳಿಯ ಹರ್ಷಾ ಶುಗರ್ಸ್‌ಗೆ ಹೋಗುತ್ತಿದೆ. ಈ ಕಬ್ಬು ಕಾರ್ಖಾನೆ ಮಾಲೀಕರು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸ್ಪಂದಿಸುವುದಿಲ್ಲ. ಸರಿಯಾದ ಸಮಯಕ್ಕೆ ಹಣ ನೀಡದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಹಾಗೆ ನೋಡಿದರೆ ಧಾರವಾಡ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಗತ್ಯವಿದೆ.
ಆದರೆ, ಇದೀಗ ಆರಂಭಿಸುತ್ತಿರುವ ಕಾರ್ಖಾನೆ ಕಲಘಟಗಿ, ಅಳ್ನಾವರದಿಂದ ಸುಮಾರು 40 ಕಿಮೀಗೂ ಹೆಚ್ಚು ದೂರ ಇದೆ. ಜತೆಗೆ ಯಾವುದೇ ನೀರಿನ ಮೂಲ ಇಲ್ಲದ, ರೈತರ ಫಲವತ್ತಾದ ಭೂಮಿಯಲ್ಲಿದೆ.
ಯಾದವಾಡ ಬಳಿ ಉದ್ದೇಶಿತ ಮೃಣಾಲ ಸಕ್ಕರೆ ಕಾರ್ಖಾನೆ ಕಲಘಟಗಿ ಅಥವಾ ಅಳ್ನಾವರ ಕಬ್ಬು ಬೆಳೆಗಾರರಿಗೆ ಯಾವುದೇ ರೀತಿ ಅನುಕೂಲವಿಲ್ಲ. ಜಿಲ್ಲೆಯಲ್ಲಿ ಸ್ಥಾಪನೆಯಾದರೂ ಜಿಲ್ಲೆಯ ರೈತರಿಗೆ 30ರಿಂದ 40 ಕಿಮೀ ದೂರ ಆಗಲಿದೆ. ಜತೆಗೆ ಧಾರವಾಡ ನಗರ ಪ್ರವೇಶಿಸಿಯೇ ಈ ಕಂಪನಿಗೆ ಕಬ್ಬಿನ ವಾಹನಗಳು ಸಂಚರಿಸಬೇಕಾದ ಅನಿವಾರ್ಯ. ಇದು ಕಷ್ಟಸಾಧ್ಯ. ನಮ್ಮ ಭಾಗದಲ್ಲಿ ಆಗಬೇಕಾದ ಕಾರ್ಖಾನೆ ಸ್ಥಳೀಯರ ವಿರೋಧದ ಮಧ್ಯೆ ಅಲ್ಲೇಕೆ ಎಂಬ ಪ್ರಶ್ನೆ? ಇದೇ ಕಂಪನಿ ನಮ್ಮಲ್ಲಿ ಸ್ಥಾಪಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಕಲಘಟಗಿ ಕಬ್ಬು ಬೆಳೆಗಾರರು ನಿಂಗಯ್ಯ ಪಟದಯ್ಯನವರ ಹೇಳುತ್ತಾರೆ.