ಕೊಪ್ಪಳ: ಮಾ.14 ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ತಮ್ಮ-ತಮ್ಮ ಇಲಾಖೆಯಿಂದ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಹಳಷ್ಟು ಜನರಿಗೆ ಕಾನೂನಿನ ಅರಿವೇ ಇಲ್ಲ. ಈ ಕುರಿತು ನಾವೆಲ್ಲರೂ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ರಾಷ್ಟ್ರೀಯ ಲೋಕ ಅದಾಲತ್ ನಡೆಯುತ್ತಿರುವ ಕುರಿತು ಹೆಚ್ಚಿನ ಪ್ರಚಾರ ನೀಡಿ.ನಗರಸಭೆ ವಾಹನ ಮತ್ತು ಬಸ್ ನಿಲ್ದಾಣ ಹಾಗೂ ಪತ್ರಿಕೆಗಳಲ್ಲಿ ಈ ಕುರಿತು ಹೆಚ್ಚು ಪ್ರಚಾರವಾಗಬೇಕು.ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥವಾದರೆ ಜನರ ಸಮಯ ಮತ್ತು ಸಂಬಂಧಗಳು ಉಳಿಯುತ್ತವೆ. ಈ ಸಲ ಹೆಚ್ಚು ಪ್ರಕರಣ ಇತ್ಯರ್ಥಪಡಿಸುವ ಗುರಿ ಇದ್ದು ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಎಂದರು.
ಬಹಳಷ್ಟು ಪ್ರಕರಣ ಕುಟುಂಬದ ಅಕ್ಕ-ಅಣ್ಣ ತಮ್ಮಂದಿರ ಪಾಲು ಕೊಡುವಂತವುಗಳೇ ಆಗಿರುತ್ತವೆ. ಅವುಗಳನ್ನು ಮನೆಯಲ್ಲಿ ಕುಳಿತು ಬಗೆಹರಿಸಿಕೊಳ್ಳಬಹುದು. ಆದರೆ ಅವು ಕೋರ್ಟಿಗೆ ಬರುತ್ತವೆ. ವಿಚ್ಛೇದನ ಪ್ರಕರಣಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ,ನಾನು ಎನ್ನುವ ಅಹಂಭಾವದಿಂದ ತಮ್ಮ ಕುಟುಂಬ ಹಾಳು ಮಾಡಿಕೊಳ್ಳುವ ಹಂತಕ್ಕೆ ಬರುತ್ತವೆ. ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಇಂದು ಎಲ್ಲರೂ ಸ್ವತಂತ್ರ ಜೀವನದಲ್ಲಿ ಬದುಕುವಂತವರಾಗಿದ್ದಾರೆ. ಮಾ.14 ರಂದು ರಾಜ್ಯಾದ್ಯಂತ ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್‌ನ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು.ಕೊಪ್ಪಳ ತಹಸೀಲ್ದಾರ ಬಸವರಾಜ, ಪರಿಸರ ಇಲಾಖೆ ಅಧಿಕಾರಿ ವೈ.ಎಸ್. ಹರಿಶಂಕರ್, ಅಬಕಾರಿ ಉಪಾಧೀಕ್ಷಕ ಆಂಜನೇಯ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ.,ಲೇಬರ್ ಇನ್ಸ್‌ಪೆಕ್ಟರ್ ಮಂಜುಳಾ ಸೇರಿದಂತೆ ನಗರಸಭೆ, ಸಾರಿಗೆ, ಅರಣ್ಯ ಹಾಗೂ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.