ಹಾವೇರಿ: ಮಕ್ಕಳಲ್ಲಿ ಸೇವಾದಳದ ಶಿಸ್ತು, ದೇಶಪ್ರೇಮ, ರಾಷ್ಟ್ರಭಕ್ತಿ ಜತೆಗೆ ಸೇವಾದಳ ಸ್ಥಾಪನೆಯಾಗಿ ನೂರು ವರ್ಷ ಗತಿಸಿದ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ದಾಸೋಹ ಭವನದಲ್ಲಿ ಭಾರತ ಸೇವಾ ದಳ ಜಿಲ್ಲಾ ಘಟಕ ಹಾವೇರಿ ಮತ್ತು ತಾಲೂಕು ಭಾರತ ಸೇವಾದಳ ಘಟಕ ಹಾವೇರಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾವೇರಿ ಆಶ್ರಯದಲ್ಲಿ ಸೇವಾದಳ ಶತಮಾನೋತ್ಸವ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೇವಾದಳದ ರಾಜ್ಯಘಟಕದ ಉಪಾಧ್ಯಕ್ಷ ಕೃಷ್ಣಪ್ಪ ದೀವಿಗಿಹಳ್ಳಿ ಮಾತನಾಡಿ, ಶತಮಾನೋತ್ಸವ ಸಂದರ್ಭದಲ್ಲಿ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ, ಭಕ್ತಿ, ಮಾನವೀಯ ಗುಣ ಬೆಳೆಸಿ, ಪೋಷಿಸುವುದು ಇದರ ಉದ್ದೇಶವಾಗಿದೆ ಎಂದರು.
ದೈಹಿಕ ಪರಿವೀಕ್ಷಕ ಆರ್.ಜಿ. ಮೇಟಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮತ್ತು ದೈಹಿಕ ಶಿಕ್ಷಣದ ಅಗತ್ಯತೆ ಕುರಿತು ವಿವರಿಸಿ ಸೇವಾದಳದ ಕಾರ್ಯಕ್ರಮಗಳನ್ನು ದೈಹಿಕ ಶಿಕ್ಷಣದ ಕಾರ್ಯಕ್ರಮಗಳ ಜತೆಗೆ ಸಂಯೋಜಿಸಿದರು.ಭಾರತ ಸೇವಾದಳ ಜಿಲ್ಲಾ ಘಟಕದ ಸಂಘಟಕ ಬಸವರಾಜ ಗುರಿಕಾರ ಮಾತನಾಡಿ, ಸೇವಾದಳದ ಹಿನ್ನೆಲೆ ಹಾಗೂ ಸ್ಥಾಪನೆಯಾಗಿ ೧೦೦ ವರ್ಷ ಗತಿಸಿದ ಸಂದರ್ಭದಲ್ಲಿ ಇದೇ ಜಿಲ್ಲೆಯವರಾದ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೇಕರ ಅವರ ಪರಿಚಯ ಮಾಡಿಕೊಟ್ಟು, ಸೇವಾದಳದ ಉದ್ದೇಶ, ಗುರಿಗಳು ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರದರ್ಶನ ವ್ಯಾಯಾಮಗಳನ್ನು ಏರೋಬಿಕ್ಸ್, ಭಾರತೀಯಂ, ಸಾರೇ ಝಹಾಂಸೆ ಅಚ್ಚಾ, ಸೈನ್ಯವು ಬಂತು..ಗೀತೆಗಳನ್ನು ಪ್ರದರ್ಶನ ಮಾಡಿಸಲಾಯಿತು.ಭಾರತ ಸೇವಾದಳದ ಜಿಲ್ಲಾ ಘಟಕದ ಸದಸ್ಯರು, ಪದಾಧಿಕಾರಿಗಳಾದ ಗಂಗಾಧರ ಗೋಣಿ, ಹೇಮಂತ. ಎಸ್.ಕೆ, ಎಸ್.ಕೆ. ದೊಡ್ಡಮನಿ, ಮುಶೆಪ್ಪನವರ, ಸಿ.ಎಸ್.ಪೂಜಾರ, ಸುಧಾ ಮಳಗಾವಿ, ಹೇಮಲತಾ ಪೂಜಾರ, ಸಿ.ಎಸ್. ಹೊಟ್ಟೆಗೌಡ್ರ, ಎಸ್.ಬಿ. ಮಠದ, ಎಸ್.ವಿ. ಹಿರೇಮಠ, ಸತೀಶ ಕೋಳಿವಾಡ ಹಾಗೂ ಹಾವೇರಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕ-ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ದೈಹಿಕ ಶಿಕ್ಷಕ ಆರ್.ಎ. ಹೊಸಮನಿ ನಿರೂಪಿಸಿದರು. ಎಸ್.ಬಿ. ಮಠದ ಸ್ವಾಗತಿಸಿದರು. ಹೇಮಂತ.ಎಸ್.ಕೆ ವಂದಿಸಿದರು.ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ: ಸೇವಾದಳ ಶತಮಾನೋತ್ಸವ ಅಂಗವಾಗಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಧ್ವಜಾರೋಹಣವನ್ನು ತಾಲೂಕಾಧ್ಯಕ್ಷ ಶಿವಕುಮಾರ ಸಂಗೂರ ನೆರವೇರಿಸಿದರು.
ಕಾರ್ಯಕ್ರಮದ ಮೆರವಣಿಗೆಗೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹಾಗೂ ಭಾರತ ಸೇವಾದಳ ರಾಜ್ಯ ಘಟಕದ ಉಪಾಧ್ಯಕ್ಷ ಕೃಷ್ಣಪ್ಪ ದೀವಿಗಿಹಳ್ಳಿ ಚಾಲನೆ ನೀಡಿದರು.ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪುನಃ ಹುಕ್ಕೇರಿಮಠದ ಶಿವಲಿಂಗೇಶ್ವರ ದಾಸೋಹ ಭವನದಲ್ಲಿ ಕಾರ್ಯಕ್ರಮ ಜರುಗಿತು. ಶಿವಕುಮಾರ ಸಂಗೂರ ಅಧ್ಯಕ್ಷತೆ ವಹಿಸಿದ್ದರು.