ಮಧುಕರ ವೃತ್ತಿಯನ್ನು ರೂಢಿಸಿಕೊಳ್ಳಬೇಕು: ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

KannadaprabhaNewsNetwork | Published : Feb 27, 2024 1:37 AM

ಸಾರಾಂಶ

ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ನಿವೃತ್ತ ಬ್ಯಾಂಕ್ ಅಧಿಕಾರಿ, ಸಾವಯವ ಕೃಷಿಕ, ದೃಷ್ಟಿ ತೊಡಕನ್ನು ಮೀರಿನಿಂತ ಸಾಧಕ ಪಿ. ಪಾಂಡುರಂಗ ಶಾನುಭಾಗ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿಯಕ್ಷಗಾನ ಕಲಾರಂಗದಲ್ಲಿ ೨೭ ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ಸೇವಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಜರುಗಿತು.ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ನಿವೃತ್ತ ಬ್ಯಾಂಕ್ ಅಧಿಕಾರಿ, ಸಾವಯವ ಕೃಷಿಕ, ದೃಷ್ಟಿ ತೊಡಕನ್ನು ಮೀರಿನಿಂತ ಸಾಧಕ ಪಿ. ಪಾಂಡುರಂಗ ಶಾನುಭಾಗ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ನಂತರ ಸಂದೇಶ ನೀಡಿದ ಶ್ರೀಗಳು, ಶಾನುಭಾಗರು ಮಧುಕರದಂತೆ ಬದುಕಿದವರು. ಹೇಗೆ ಜೇನು ನೊಣ ಎಲ್ಲ ರುಚಿಯ ಹೂವುಗಳನ್ನು ಸಂಗ್ರಹಿಸಿ ಸಿಹಿಯನ್ನು ಕೊಡುವಂತೆ, ಇವರೂ ಬದುಕಿನಲ್ಲಿ ಬಂದ ಸ್ತುತಿ-ನಿಂದೆಗಳಿಗೆ ಕಿವಿಕೊಡದೆ ಪ್ರೀತಿಯನ್ನು ಹಂಚಿದವರು. ನಿಶ್ಚಿಂತೆಯಿಂದ ಬದುಕುವವರಿಗೆ ಅವರು ನಿದರ್ಶನಪ್ರಾಯರಾಗಿದ್ದಾರೆ ಎಂದರು.ಪ್ರಶಸ್ತಿ ಸ್ವೀಕರಿಸಿದ ಪಾಂಡುರಂಗರು, ಕಲಾರಂಗ ನೀಡಿದ ಪ್ರಶಸ್ತಿಯನ್ನು ವಿನಮ್ರನಾಗಿ ಸ್ವೀಕರಿಸಿದ್ದೇನೆ, ಸಮಾಜದ ಒಳಿತಿಗೆ ಕೆಲಸ ಮಾಡುವವರಿಗೆ ಇದು ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಇತ್ತೀಚೆಗೆ ಪಿಎಚ್.ಡಿ ಪದವಿ ಪಡೆದ ರಂಗಸಾಧಕಿ ಡಾ. ಭ್ರಾಮರಿ ಶಿವಪ್ರಕಾಶ್ ಅವರನ್ನು ಗೌರವಿಸಲಾಯಿತು. ಪ್ರತಿವರ್ಷದಂತೆ ಸಂಸ್ಥೆಗೆ ದೊಡ್ಡಮೊತ್ತ ನೀಡಿ ಸಹಕರಿಸಿದ ಸುಬ್ರಹ್ಮಣ್ಯ ಬೈಪಡಿತ್ತಾಯರನ್ನು ಶಾಲುಹೊದಿಸಿ ಗೌರವಿಸಲಾಯಿತು.ಪಾಂಡುರಂಗ ಶಾನುಭಾಗರ ವಿದ್ಯಾ ಗುರುಗಳಾದ ಮಧ್ವರಮಣ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಪ್ರಣಾದ್ ರಾವ್ ಪ್ರಾರ್ಥನೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಎಸ್. ಗೋಪಾಲಕೃಷ್ಣರ ಕುರಿತು ಸಂಸ್ಮರಣ ಭಾಷಣ ಮಾಡಿದರು. ನಾರಾಯಣ ಎಂ. ಹೆಗಡೆ, ಪಾಂಡುರಂಗ ಶಾನುಭಾಗ್ ಅವರನ್ನು ಸಭೆಗೆ ಪರಿಚಯಿಸಿದರು. ಎಚ್.ಎನ್. ಶೃಂಗೇಶ್ವರ ವಂದಿಸಿದರು.

Share this article