ಮಲ್ಲೇಶ್ ಹತ್ಯೆ ಪ್ರಕರಣದಲ್ಲಿ ಏಳು ಆರೋಪಿಗಳ ಬಂಧನ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಚಿಕ್ಕಲ್ ರಸ್ತೆಯ ಮೇಲ್ವೇತುವೆ ಕೆಳಗಿನ ಬಾ‌ರ್‌ವೊಂದರ ಬಳಿ ರಾತ್ರಿ ಮಲ್ಲೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಮೂವರು ಮಲ್ಲೇಶ್‌ನ ಬೈಕ್‌ಗೆ ಡಿಕ್ಕಿ ಹೊಡೆಸಿ ಬೀಳಿಸಿದ್ದರು. ನೋಡ ನೋಡುತ್ತಿದ್ದಂತೆ ಏಳು ಮಂದಿ ಮಲ್ಲೇಶ್ ನನ್ನು ಸುತ್ತುವರಿದು ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು, ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹಳೆ ದ್ವೇಷದ ಹಿನ್ನೆಲೆ ದೀಪಾವಳಿ ದಿನದಂದೇ ನಗರದ ಚಿಕ್ಕಲ್ ಮೇಲ್ವೇತುವೆ ಬಳಿ ಗಾಂಧಿ ಬಜಾರ್ ಧರ್ಮರಾಯನ ಕೇರಿ ನಿವಾಸಿ ಮಲ್ಲೇಶನನ್ನು (35) ಬರ್ಬರವಾಗಿ ಕೊಲೆ ಮಾಡಿದ್ದ 7 ಹಂತಕರನ್ನು ಶಿವಮೊಗ್ಗದ ಕೋಟೆ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್, ಶ್ರೇಯಸ್ ಅಲಿಯಾಸ್ ಪಾತಾಳಿ, ವೇಣುಗೋಪಾಲ್, ಕಿರಣ್, ಪ್ರಕಾಶ್, ಸುರೇಶ, ಪ್ರಭು ಬಂಧಿತ ಆರೋಪಿಗಳು.

ಚಿಕ್ಕಲ್ ರಸ್ತೆಯ ಮೇಲ್ವೇತುವೆ ಕೆಳಗಿನ ಬಾ‌ರ್‌ವೊಂದರ ಬಳಿ ರಾತ್ರಿ ಮಲ್ಲೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಮೂವರು ಮಲ್ಲೇಶ್‌ನ ಬೈಕ್‌ಗೆ ಡಿಕ್ಕಿ ಹೊಡೆಸಿ ಬೀಳಿಸಿದ್ದರು. ನೋಡ ನೋಡುತ್ತಿದ್ದಂತೆ ಏಳು ಮಂದಿ ಮಲ್ಲೇಶ್ ನನ್ನು ಸುತ್ತುವರಿದು ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು, ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದ.

ಶಿಕ್ಷಕಿ ಆತ್ಮಹತ್ಯೆಗೆ ಕಾರಣನಾಗಿದ್ದ:

ಖಾಸಗಿ ಶಾಲೆ ಶಿಕ್ಷಕಿಯಾಗಿದ್ದ ಸ್ವಾತಿಯನ್ನು ಪ್ರೀತಿಸುತ್ತಿದ್ದ ಮಲ್ಲೇಶ್‌, ಮದುವೆಯಾಗುವಂತೆ ಸ್ವಾತಿ ಅವರಿಗೆ ಪದೇಪದೆ ಒತ್ತಾಯಿಸಿದ್ದ. ಈತನ ನಿರಂತರ ಕಾಟ ತಾಳಲಾರದೇ ಸ್ವಾತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ ಮಲ್ಲೇಶ್ ಹೆಸರು ಉಲ್ಲೇಖಿಸಿದ್ದ ಹಿನ್ನೆಲೆ ಮಲ್ಲೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಕೆಲವು ತಿಂಗಳು ಜೈಲಿನಲ್ಲಿದ್ದ ಮಲ್ಲೇಶ್ ಜಾಮೀನಿನ ಮೇಲೆ ಹೊರಗೆ ಬಂದು ಬೆಂಗಳೂರಿನಲ್ಲಿ ವಾಸವಾಗಿದ್ದ.

ದೀಪಾವಳಿ ಹಬ್ಬಕ್ಕೆಂದು ತಾಯಿಯನ್ನು ನೋಡಲು ಮಲ್ಲೇಶ್‌ ಶಿವಮೊಗ್ಗಕ್ಕೆ ಬಂದಿದ್ದರು. ಈ ಹಿನ್ನೆಲೆ ಎರಡು ವರ್ಷಗಳಿಂದ ಮಲ್ಲೇಶ್‌ನ ಮೇಲೆ ಸೇಡು ತೀರಿಸಿಕೊಳ್ಳಲು ಸ್ವಾತಿ ಸಹೋದರ ಕಾರ್ತಿಕ್ ಮತ್ತು ಆತನ ಸ್ನೇಹಿತರು ಹೊಂಚು ಹಾಕಿದ್ದರು.

ಹಲವು ದಿನಗಳ ಬಳಿಕ ಮಂಗಳವಾರ ರಾತ್ರಿ ಕಾರ್ತಿಕ್ ಮತ್ತು ಆತನ ಸ್ನೇಹಿತರ ಕಣ್ಣಿಗೆ ಮಲ್ಲೇಶ್ ಬಿದ್ದಿದ್ದ. ಆತನ ಚಲನವಲನ ಗಮನಿಸಿದ ಕಿರಣ್ ಕೂಡಲೇ ಕಾರ್ತಿಕ್‌ಗೆ ಮಾಹಿತಿ ನೀಡಿದ್ದ. ಬಳಿಕ ಕಾರ್ತಿಕ್ ಮತ್ತು ಗ್ಯಾಂಗ್ ಚಿಕ್ಕಲ್ ಬಳಿ ಮಲ್ಲೇಶ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

- - -

Share this article