ಮಂಡ್ಯ : ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಹಲವಾರು ಹಿರಿಯ ನಾಯಕರು ಪಕ್ಷಭೇದ ಮರೆದು ಪಾಲ್ಗೊಂಡಿದ್ದರು.ಚಾಮರಾಜನಗರಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 2.12ರ ಸಮಯಕ್ಕೆ ಸೋಮನಹಳ್ಳಿಗೆ ಆಗಮಿಸಿದರು.
ಅವರೊಂದಿಗೆ ಎಚ್.ಸಿ.ಮಹದೇವಪ್ಪ ಕೂಡ ಇದ್ದರು. ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಿದ ಜಾಗಕ್ಕೆ ನಮನ ಸಲ್ಲಿಸಿ ಅಂತ್ಯಸಂಸ್ಕಾರದ ಸ್ಥಳಕ್ಕೆ ಆಗಮಿಸಿದರು. ಆ ವೇಳೆಗೆ ವಿಪಕ್ಷ ನಾಯಕರಾದ ಆರ್.ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವಥನಾರಾಯಣ, ಸಿ.ಟಿ.ರವಿ ಇದ್ದರು. ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ ಕೂಡ ಆಗಮಿಸಿದರು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕನಕಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ, ಶ್ರೀ ಶೇಖರ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ ಪಾಲ್ಗೊಂಡಿದ್ದರು.ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ.ಜಿ.ಪರಮೇಶ್ವರ್, ಎಚ್.ಕೆ. ಪಾಟೀಲ್, ಡಾ.ಎಂ.ಸಿ.ಸುಧಾಕರ್, ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಸುಧಾಕರ್, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಮಾಜಿ ಸಚಿವರಾದ ಎನ್.ಶಿವಣ್ಣ, ಟಿ.ಬಿ. ಜಯಚಂದ್ರ, ಆಂಜನೇಯ, ಎನ್. ಶಿವಣ್ಣ, ಡಾ.ಕೆ. ಸುಧಾಕರ್, ಬಿ.ಎಲ್. ಶಂಕರ್, ಕೆ.ಸಿ. ನಾರಾಯಣಗೌಡ, ರಾಣಿ ಸತೀಶ್, ಮೋಟಮ್ಮ, ಬಿ. ಸೋಮಶೇಖರ್, ಮಾಜಿ ಸಂಸದರಾದ ಸುಮಲತಾ ಅಂಬರೀಶ್, ಡಿ.ಕೆ. ಸುರೇಶ್, ಶಾಸಕರಾದ ಪಿ. ರವಿಕುಮಾರ್, ಕೆ.ಎಂ. ಉದಯ್, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಎಲ್.ಆರ್. ಶಿವರಾಮೇಗೌಡ, ಡಾ.ಕೆ. ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ಮಲ್ಲಾಜಮ್ಮ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.
ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ರಮೇಶ್ ಬಂಡಿಸಿದ್ದೇಗೌಡ ಅಂತ್ಯಸಂಸ್ಕಾರದ ಸ್ಥಳದಲ್ಲಿ ನಿಂತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಂತೆ ನಡೆಯುತ್ತಿದ್ದುದು ಕಂಡುಬಂದಿತು. ಸರ್ಕಾರಿ ಗೌರವ ಸಲ್ಲಿಸುವ ವೇಳೆ ಪಕ್ಷಬೇಧವಿಲ್ಲದೆ ಎಲ್ಲರಿಗೂ ಕೃಷ್ಣರವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಅದೇ ರೀತಿ ಚಿತೆಗೆ ಶ್ರೀಗಂಧದ ತುಂಡುಗಳನ್ನಿಡುವುದಕ್ಕೂ ಅನುಕೂಲ ಕಲ್ಪಿಸಲಾಗಿತ್ತು. ಅಜಾತಶತ್ರುವಾಗಿ ಬದುಕಿದ್ದ ಎಸ್.ಎಂ.ಕೃಷ್ಣ ಅವರು ಅಂತಿಮ ಯಾತ್ರೆಯಲ್ಲೂ ಅಜಾತಶತ್ರುವಾಗಿಯೇ ಉಳಿದಿದ್ದುದು ಕಂಡುಬಂದಿತು.