ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 71ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 71ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಯುನಿಟ್-3ರಲ್ಲಿ 229 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಕೇಂದ್ರಿಕೃತ ಬೃಹತ್ ಮಾರುಕಟ್ಟೆ ಹಾಗೂ ವಾಣಿಜ್ಯ ಕೇಂದ್ರ ನಿರ್ಮಾಣಕ್ಕೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಅನುಮತಿ ದೊರೆತಿರುವುದು ನಗರದ ಭವಿಷ್ಯದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.
ಆಲಮಟ್ಟಿ ಹಿನ್ನೀರಿನಿಂದ ನಡುಗಡ್ಡೆಯಾಗುವ ಹಳೆಯ ನಗರದ ವಾರ್ಡ್ ನಂ.1, 2, 3, 6 ಮತ್ತು 7ರ 1,057 ಕಟ್ಟಡಗಳ ಭೂಸ್ವಾಧೀನಕ್ಕೆ ₹52,16 ಕೋಟಿ ಅನುಮೋದನೆಯಾಗಿದ್ದು, ಪುನರ್ವಸತಿ ಕಾರ್ಯ ಪ್ರಗತಿಯಲ್ಲಿದೆ. 11(1) ಅಧಿಸೂಚನೆ ಹಾಗೂ ಜಂಟಿ ಮಾಪನ ಪೂರ್ಣಗೊಂಡಿದ್ದು, ಸಂತ್ರಸ್ತರಿಗೆ ನ್ಯಾಯುತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ 10 ತಾಲೂಕುಗಳನ್ನು ತೀವ್ರ ಬರಪೀಡಿತವೆಂದು ಘೋಷಿಸಲಾಗಿದ್ದು, 3.06 ಲಕ್ಷ ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆ ಹಾನಿಗೆ ₹420.66 ಕೋಟಿ ಬೆಳೆಹಾನಿ ಪರಿಹಾರದ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರಿಗೆ ಮೊದಲ ಕಂತಿನ 2,500 ಇನ್ಪುಟ್ ಸಬ್ಸಿಡಿ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯ ಹುನಗುಂದ ಮತ್ತು ಬೀಳಗಿ ತಾಲೂಕುಗಳಲ್ಲಿ ಮುಖ್ಯಂತ್ರಿ ನೇಗಿಲ ಯೋಗಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಸೇವಾ ಆಂದೋಲನದಡಿ 6,069 ಅರ್ಜಿಗಳ ಪೈಕಿ 5,238 ಅರ್ಜಿ ಇತ್ಯರ್ಥಪಡಿಸಲಾಗಿದೆ. ಯುವನಿಧಿ ಯೋಜನೆಯಡಿ 24,452 ಯುವಕರು ಹಾಗೂ ವಿವಿಧ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡಲಾಗುತ್ತದೆ.
ಕನ್ನಡ ನಾಡಿನ ಏಕತೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಪರಂಪರೆ ಮುಂದುವರಿಸಿ ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಬಾಗಲಕೋಟೆ ಶಾಸಕ ಉಮೇಶ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ಅನೀಲ ದಡ್ಡಿ, ಬುಡಾ ಅಧ್ಯಕ್ಷ ಅಬ್ದುಲ್ ರಜಾಕ ಬೇನೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಓ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ವಿಭಾಗಾಧಿಕಾರಿ ಕ್ಯಾಪ್ಟನ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಾಸುದೇವಸ್ವಾಮಿ ಇತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ರಾಜ್ಯೋತ್ಸವ ಗೌರವ:
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.