ರಸ್ತೆಯಲ್ಲೇ ಹರಿಯುವ ಕೊಳಚೆ ನೀರು, ಕಾಂಪೌಂಡ್ ಹಿಡಿದು ಸಾಗುವ ಶಾಲಾ ಮಕ್ಕಳು

KannadaprabhaNewsNetwork |  
Published : Jun 09, 2026, 02:15 AM IST
 | Kannada Prabha

ಸಾರಾಂಶ

ನಗರದ ಕೋಡಿಬಾಗ ವ್ಯಾಪ್ತಿಯಲ್ಲಿ ಸಣ್ಣ ಮಳೆಗೂ ರಸ್ತೆಗಳು ಜಲಾವೃತಗೊಳ್ಳುತ್ತಿದ್ದು, ಗಟಾರ ಮುಚ್ಚಿಹೋಗಿ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಕೋಡಿಬಾಗ ವ್ಯಾಪ್ತಿಯಲ್ಲಿ ಸಣ್ಣ ಮಳೆಗೂ ರಸ್ತೆಗಳು ಜಲಾವೃತಗೊಳ್ಳುತ್ತಿದ್ದು, ಗಟಾರ ಮುಚ್ಚಿಹೋಗಿ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ ಕಾರವಾರ ನಗರಸಭೆ ಅಧಿಕಾರಿಗಳು ಮಾತ್ರ ಜಾಣಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಡಿಬಾಗದಲ್ಲಿರುವ ಹೆಂಜಾ ನಾಯ್ಕ್ ಪುತ್ಥಳಿಯ ಎಡಭಾಗದ ಕಿರಿದಾದ ರಸ್ತೆಯ ಪಕ್ಕದಲ್ಲಿರುವ ಗಟಾರವು ಸಂಪೂರ್ಣವಾಗಿ ಮಣ್ಣು ಹಾಗೂ ಹೂಳಿನಿಂದ ತುಂಬಿಹೋಗಿದೆ. ಪರಿಣಾಮವಾಗಿ, ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ಇಡೀ ರಸ್ತೆಯಲ್ಲಿ ನೀರು ಆವರಿಸಿಕೊಂಡಿದೆ. ಸದ್ಯ ಶಾಲೆಗಳು ಆರಂಭವಾಗಿರುವುದರಿಂದ, ರಸ್ತೆಯಲ್ಲಿ ನಡೆದಾಡಲು ಜಾಗವಿಲ್ಲದೇ ಚಿಕ್ಕ ಮಕ್ಕಳು ಪಕ್ಕದ ಕಾಂಪೌಂಡ್ ಗೋಡೆ ಹಿಡಿದುಕೊಂಡು, ನೇತಾಡಿಕೊಂಡು ಸಾಗುವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳು ಆಸರೆಯಾಗಿ ಹಿಡಿದುಕೊಂಡು ಸಾಗುವ ಕಾಂಪೌಂಡ್ ಗೋಡೆ ಮಳೆಯಿಂದಾಗಿ ದುರ್ಬಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಮಕ್ಕಳ ಮೈಮೇಲೆ ಬೀಳುವ ಭೀತಿ ಎದುರಾಗಿದೆ. ಯಾವುದಾದರೂ ದೊಡ್ಡ ಅನಾಹುತ, ಪ್ರಾಣಹಾನಿ ಸಂಭವಿಸುವ ಮುನ್ನವೇ ನಗರಸಭೆಯವರು ಇದನ್ನು ಸರಿಪಡಿಸಿಕೊಡಿ ಎಂದು ಸಾರ್ವಜನಿಕರು ಅಂಗಲಾಚುತ್ತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇನ್ನು ಗಟಾರ ಬ್ಲಾಕ್ ಆಗಿರುವುದರಿಂದ ನೀರು ಅತ್ಯಂತ ಗಲೀಜಾಗಿ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದೇ ಕೊಳಚೆ ನೀರಿನಲ್ಲಿ ನಿತ್ಯ ಓಡಾಡುವುದರಿಂದ ಮಕ್ಕಳ ಕಾಲುಗಳು ಕೊಳೆಯುವ ಸ್ಥಿತಿ ತಲುಪಿದ್ದು, ಚರ್ಮರೋಗ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ಪೋಷಕರಿದ್ದಾರೆ.

ಈ ಗಂಭೀರ ಸಮಸ್ಯೆಯ ಕುರಿತು ಕಳೆದ 8-10 ದಿನಗಳಿಂದಲೇ ನಗರಸಭೆ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಫೋಟೋ, ವಿಡಿಯೋ ಕಳುಹಿಸಿ ದೂರು ನೀಡಲಾಗಿದೆ. ಆದರೆ, ಯಾವುದೇ ಜವಾಬ್ದಾರಿಯಿಲ್ಲದವರಂತೆ ವರ್ತಿಸುತ್ತಿರುವ ಅಧಿಕಾರಿಗಳು, ಸಮಸ್ಯೆಯನ್ನು ಬಗೆಹರಿಸಲು ಈವರೆಗೂ ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಈ ಕೊಳಚೆ ನೀರಿನ ತೊಂದರೆಯಿಂದ ನಮ್ಮನ್ನು ಹಾಗೂ ಶಾಲಾ ಮಕ್ಕಳನ್ನು ಪಾರು ಮಾಡಬೇಕು ಎಂದು ಕೋಡಿಬಾಗದ ನಿವಾಸಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಂಭುಲಿಂಗನಗೌಡ ಕಾಂಗ್ರೆಸ್ ತೆಕ್ಕೆಗೋ, ಬಿಜೆಪಿಗೋ
ಜಮೀರಗೆ ಡಿಸಿಎಂ, ಅಬ್ಬಯ್ಯಗೆ ಸಚಿವ ಸ್ಥಾನ ನೀಡಿ