ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ನಂ.3 ವಿ.ಸಿ.ನಾಲಾ ವಿಭಾಗದ ಎದುರು ಸೇರಿದ ಪ್ರತಿಭಟನಾಕಾರರು, ಪಟ್ಟಣದ ವಿವಿಧ ಬಡಾವಣೆಗಳ ತ್ಯಾಜ್ಯದ ಕಲುಷಿತ ನೀರು ವಿಶ್ವೇಶ್ವರಯ್ಯ ನಾಲೆ ಸೇರ್ಪಡೆಗೊಂಡು ನಾಲೆ ದೊಡ್ಡ ಕೊಳಚೆಗುಂಡಿಯಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ವಿ.ಸಿ.ನಾಲೆಯಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ನೀರು ಹರಿಯದ ಕಾರಣ ಇಡೀ ಪಾಂಡವಪುರ ಪಟ್ಟಣದ ವಿವಿಧ ಬಡಾವಣೆಗಳ ತ್ಯಾಜ್ಯ ನೀರು ನಾಲೆಗೆ ಹರಿದು ಬರುತ್ತಿದೆ. ಕೊಳಚೆ ನೀರು ಕಾವೇರಿ ನೀರಿನಲ್ಲಿ ಸೇರಿಕೊಂಡು ಜನ - ಜಾನುವಾರುಗಳು ಹಲವು ಕಾಯಿಲೆಗಳಿಗೆ ತುತ್ತಾಗುವ ಆತಂಕ ಎದುರಾಗಿದೆ ಎಂದು ಕಿಡಿಕಾರಿದರು.ವಿಸಿ ನಾಲೆಯು ದೊಡ್ಡದಾದ ಮೋರಿಯಂತಾಗಿದೆ. ಕಲುಷಿತ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಪಟ್ಟಣದ ಕಲುಷಿತ ನೀರು ನಾಲೆ ನೀರಿನೊಂದಿಗೆ ಸೇರುತ್ತಿದೆ. ಆ ಮೂಲಕ ಜನ ಜಾನುವಾರುಗಳ ಆರೋಗ್ಯ ಕೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಳಿಕ ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ, ಚರಂಡಿ ನೀರು ನಮ್ಮ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಗೆ ಸೇರದಂತೆ ಪುರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಶ್ರೀನಿವಾಸ್ ನಾಯಕ್, ಗ್ರಾಪಂ ಉಪಾಧ್ಯಕ್ಷ ಯಶ್ವಂತ್, ಶಿವಕುಮಾರ್, ದೊರೆಸ್ವಾಮಿ, ಕನಗನಮರಡಿ ನಾಗರಾಜು, ಹೌಸಿಂಗ್ ಬೋರ್ಡ್ ನಿರ್ದೇಶಕ ಭಾಸ್ಕರ್, ರವಿಕುಮಾರ್, ಜಲೇಂದ್ರ, ಪುರಸಭೆ ಮ್ಯಾನೇಜರ್ ಮಂಜುಳ, ದೊರೆಸ್ವಾಮಿ, ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.