ರಸ್ತೆ ಮೇಲೆ ಚರಂಡಿ ನೀರು: ಸಂಕಷ್ಟದಲ್ಲಿ ಜನರು

KannadaprabhaNewsNetwork |  
Published : Feb 28, 2026, 03:00 AM IST
 ಪೋಟೋ: 26 ಜಿಎಲ್‌ ಡಿ2- ಗುಳೇದಗುಡ್ಡ ಪಟ್ಟಣದ ಮೂಕೆಶ್ವರಿ ನಗರದ ತೆರೆದ ದೊಡ್ಡ ಗಾತ್ರದ ಗಟಾರರದ ನೀರು  ಅಪೂರ್ಣ  ಕಾಮಗಾರಿಯಿಂದ ರಸ್ತೆಗೆ ಹರಿಯುತ್ತಿರುವುದು.  | Kannada Prabha

ಸಾರಾಂಶ

ಗುಳೇದಗುಡ್ಡ ಪಟ್ಟಣದ ಮೂಕೇಶ್ವರಿ ನಗರದ ವಾರ್ಡ್ ನಂಬರ್ 6ರ ಡಿವಿಜನ್ ನಂ.21ರಲ್ಲಿ ಪುರಸಭೆ ಒಳಚರಂಡಿ ನೀರು ರಸ್ತೆ ಮೇಲೆ ಹರಿದು ಬಡಾವಣೆ ಸೇರುತ್ತಿದ್ದು, ಬಡಾವಣೆಯ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಮೂಕೇಶ್ವರಿ ನಗರದ ವಾರ್ಡ್ ನಂಬರ್ 6ರ ಡಿವಿಜನ್ ನಂ.21ರಲ್ಲಿ ಪುರಸಭೆ ಒಳಚರಂಡಿ ನೀರು ರಸ್ತೆ ಮೇಲೆ ಹರಿದು ಬಡಾವಣೆ ಸೇರುತ್ತಿದ್ದು, ಬಡಾವಣೆಯ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮೂಕೇಶ್ವರಿ ನಗರದ ಒಟ್ಟು 280 ಮನೆಗಳ ಚರಂಡಿ ನೀರು 10 ವರ್ಷಗಳಿಂದ ಸರಾಗವಾಗಿ ಹರಿದು ಹೋಗಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮುಂದೆ ಗಟಾರ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ನಿತ್ಯ ಸಂಚರಿಸುವ ಸ್ಥಳೀಯರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದರೆ, ಕೊಳಚೆ ನೀರಲ್ಲೇ ನಡೆದುಕೊಂಡು ಹೋಗುವ ಶಾಲಾ ಮಕ್ಕಳು ಚರ್ಮರೋಗಕ್ಕೆ ತುತ್ತಾಗುತ್ತಿದ್ದಾರೆ.

ಬಡಾವಣೆಗೆ ನುಗ್ಗುವ ಗಟಾರ ನೀರು:

ಈ ನಗರ ಗುಡ್ಡದ ಇಳಿಜಾರಿಗೆ ಇರುವುದರಿಂದ ಮಳೆಗಾಲದಲ್ಲಿ ಮಳೆಯ ನೀರು ರಭಸವಾಗಿ ಹರಿದು ತೆರೆದ ಬೃಹದಾಕಾರದ ಗಟಾರ ಸೇರುತ್ತದೆ. ಗಟಾರ ಕಾಮಗಾರಿ ಅರ್ಧದಷ್ಟು ಮಾತ್ರ ನಿರ್ಮಾಣವಾಗಿ ಸ್ಥಗಿತವಾಗಿದ್ದು, ಚರಂಡಿಯ ಕೊಳಚೆ ನೀರು ರಸ್ತೆ ಮೇಲೆ ಹಳ್ಳದಂತೆ ಹರಿದು, ಪಕ್ಕದ ಬಸವೇಶ್ವರ ನಗರದ ಬಡಾವಣೆಗೆ ನುಗ್ಗಿ ಕೆರೆಯ ರೀತಿ ಮಡುಗಟ್ಟಿ ನಿಲ್ಲುತ್ತದೆ. ಈ ನೀರು ಮನೆಗಳ ತಳಪಾಯಗಳಿಗೆ ಹೊಕ್ಕು ಮನೆಗಳು ಅಭದ್ರಗೊಳ್ಳುತ್ತಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಗಳು ಅಲ್ಪಾವಧಿಯಲ್ಲಿಯೇ ಬೀಳುವ ಸ್ಥಿತಿಗೆ ಬರುತ್ತಿವೆ. ಮಡುಗಟ್ಟಿ ವರ್ಷವಿಡೀ ನಿಲ್ಲುವ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚರ್ಮರೋಗಕ್ಕೆ ಕಾರಣವಾಗ್ತಿದೆ ಕೊಳಚೆ ನೀರು:

ಚರಂಡಿ ನೀರು ಸದಾ ರಸ್ತೆ ಮೇಲೆ ಹರಿಯುವುದರಿಂದ ಶಾಲಾ ಮಕ್ಕಳಿಗೆ ಮತ್ತು ಅಲ್ಲಿನ ನಿವಾಸಿಗಳಿಗೆ ಆ ನೀರಿನಲ್ಲಿಯೇ ನಿತ್ಯ ಹತ್ತಾರು ಸಲ ಹೋಗಿ ಬರಬೇಕಿದೆ. ಇದರಿಂದ ಚರ್ಮ ರೋಗ, ಕಾಲುಗಳ ತುರಿಕೆ ಕಂಡು ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳಾದ ಬಡ ಕೂಲಿಕಾರರು ಆರೋಪಿಸಿದ್ದಾರೆ.

ಈ ಬಡಾವಣೆಯಲ್ಲಿ ಶೇ.95ರಷ್ಟು ಕೂಲಿಕಾರ್ಮಿಕರ ಮನೆಗಳಿವೆ. ಬಡತನದ ಬಾಧೆ, ರೋಗ ಭೀತಿ, ಕಲುಷಿತ ವಾತಾವರಣ, ಮಾನಸಿಕ ಕಿರಿಕಿರಿ ಕಾಡುತ್ತಿವೆ. ಆದಷ್ಟು ಬೇಗ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳಾದ ರೆಡ್ಡಿ ಎಚ್. ನಡುವಿನಮನಿ, ನರಿಯಪ್ಪ ತೋಟದ, ಸಿಕಂದರ್ ಇಲಕಲ್, ಭೀಮಶಿ ಭೂವಿ, ನಿಯಾಜ್ ಮೋಮಿನ್, ಬೂತಲ್ ಸೇರಿದಂತೆ ಇನ್ನಿತರ ನಿವಾಸಿಗಳು ಪುರಸಭೆ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ಆಗ್ರಹಿಸಿದ್ದಾರೆ.

ಪುರಸಭೆಯ ಸಿ.ಎಂ.ಐ.ಡಿ.ಪಿ. ಯೋಜನೆಯಡಿ ಮೂಕೇಶ್ವರಿ ನಗರದ ತೆರೆದ ಚರಂಡಿ ಕಾಮಗಾರಿಯನ್ನು ₹20 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆಡಳಿತಾತ್ಮಕ ಅನುಮೋದನೆ ದೊರಕಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು.

- ಎ.ಎಚ್. ಮುಜಾವರ ಮುಖ್ಯಾಧಿಕಾರಿ, ಪುರಸಭೆ ಗುಳೇದಗುಡ್ಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ ಕುಡಿವ ನೀರಿನ ಬಗ್ಗೆ ಎಚ್ಚರವಿರಲಿ
ಶಾಲಾ ಕಾಲೇಜುಗಳು ಮೊದಲು ನಶಾಮುಕ್ತವಾಗಲಿ:ಡಾ.ಭಗವಾನ್