ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಒಂದು ತಿಂಗಳಿಂದ ಪಟ್ಟಣದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಒಳಚರಂಡಿಯ ಚೇಂಬರ್ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಒಳಚರಂಡಿ ಮಂಡಳಿ ಇಲಾಖೆಯವರಾಗಲಿ ಅಥವಾ ಪುರಸಭೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮುಖಂಡ ವಿಜಯ ಬಡಿಗೇರವರ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಸೋಮವಾರ ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.ವಿಜಯ ಬಡಿಗೇರ ಮಾತನಾಡಿ, ಒಂದು ತಿಂಗಳಿಂದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಒಳಚಂಡಿ ಚೇಂಬರ್ ಸಂಪೂರ್ಣ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿದು ಗಬ್ಬು ವಾಸನೆ ಹರಡಿದೆ. ಅಲ್ಲದೆ, ಕುಡಿಯುವ ನೀರಿನೊಂದಿಗೆ ಸೇರಿ ಕಲುಷಿತ ನೀರು ಕುಡಿಯಬೇಕಾಗಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಹಲವು ಬಾರಿ ಗಮನಕ್ಕೆ ತಂದರೂ ಒಳಚರಂಡಿ ಮಂಡಳಿ ಅಥವಾ ಪುರಸಭೆ ಸಿಬ್ಬಂದಿ ಸ್ವಚ್ಛತಾ ಕೆಲಸ ಮಾಡುತ್ತಿಲ್ಲ.
ಬಡಾವಣೆಯಲ್ಲಿ ವಿದ್ಯುತ್ ದೀಪ ಅಳವಡಿಸಿಲ್ಲ ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಪ್ರತಿಭಟನೆ ದಾರಿ ಹಿಡಿಯಬೇಕಾಗಿದೆ. ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ನಡೆಯಲಿದೆ ಎಂದರು.ಸ್ಥಳಕ್ಕೆ ಬಂದ ಪಿಎಸೈ ಸಂಜಯ ತಿಪ್ಪಾರೆಡ್ಡಿ ನೇತೃತ್ವದ ಪೊಲೀಸ್ ತಂಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ನಿವಾಸಿಗಳ ಸಮಸ್ಯೆ ಆಲಿಸಿದರು. ಬಳಿಕ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಸಧ್ಯ ಒಳಚರಂಡಿ ಮಂಡಳಿಯವರು ನಿರ್ಮಿಸಿದ ಕಾಮಗಾರಿ ಮುಕ್ತಾಯಗೊಂಡಿದೆಯೋ ಅಥವಾ ಇಲ್ಲವೋ ಎಂಬದರ ಬಗ್ಗೆ ಸ್ಪಷ್ಟ ವರದಿ, ನೀಲನಕ್ಷೆಯನ್ನು ಪುರಸಭೆಗೆ ಹಸ್ತಾಂತರ ಮಾಡಿಲ್ಲ. ಇದರಿಂದ ಚೇಂಬರ್ ಬ್ಲಾಕ್ ಆದರೂ ಸ್ವಚ್ಛತೆ ಮಾಡಲು ಆಗುತ್ತಿಲ್ಲ. ಬೀದಿದೀಪ ಸೇರಿದಂತೆ ಮೂಲ ಸಮಸ್ಯೆಗಳನ್ನು 28 ಗಂಟೆಯೊಳಗೆ ಬಗೆಹರಿಸಲಾಗುವುದು ಎಂದು ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಇಷ್ಟು ದಿನವಾದರೂ ಮಾಡದವರು 24 ಗಂಟೆಗಳಲ್ಲಿ ಹೇಗೆ ಬಗೆಹರಿಸುತ್ತೀರಿ. ಸಮಸ್ಯೆ ಬಗೆಹರಿಸಿದ ಮೇಲೆಯೇ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದು ಪಟ್ಟು ಹಿಡಿದರು.
ಪಿಎಸೈ ಸಂಜಯ ತಿಪ್ಪಾರೆಡ್ಡಿ ಮಧ್ಯೆ ಪ್ರವೇಶಿಸಿ ಪೊಲೀಸ್ ಇಲಾಖೆಗೆ ತಿಳಿಸದೆ ದಿಢೀರ್ ಪ್ರತಿಭಟನೆ ಮಾಡುವುದು ಅಪರಾಧ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋರಾಟ ಮಾಡಬೇಕು. ಅಧಿಕಾರಿಗಳಿಗೆ ಒಂದು ಅವಕಾಶ ನೀಡಿ. ಅವರು ಸಮಸ್ಯೆ ಪರಿಹರಿಸದಿದ್ದರೆ ಅನುಮತಿ ಪಡೆದು ಹೋರಾಟ ಮುಂದುವರೆಸಿ ಎಂದು ಮನವೊಲಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.ವಿದ್ಯಾನಗರ ಬಡಾವಣೆಯ ಶರಣು ಮಾಡಗಿ, ಮಹಾಂತೇಶ ಹಿರೇಮಠ, ವಿಜಯ ವಡವಡಗಿ, ರವಿ ಕಮತ, ಮಹಾಂತೇಶ ಬಿರಾದಾರ, ವಿರುಪಾಕ್ಷಿ ಪತ್ತಾರ ಸೇರಿದಂತೆ ಹಲವರು ಇದ್ದರು.