ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಂತ ಸೇವಾಲಾಲ್ 17 ನೇ ಶತಮಾನದಲ್ಲಿ ಮುಂದಿನ ದಿನದಲ್ಲಿ ಹಸುವಿನ ಗಂಜಲ, ಸಗಣಿ, ಕುಡಿಯುವ ನೀರು ಮಾರಾಟವಾಗುತ್ತದೆ ಎಂಬ ಅವರ ಮಾತು ಪ್ರಸ್ತುತ ನಿಜವಾಗಿದೆ. ಅವರು ತಮ್ಮ ಆದ್ಯಾತ್ಮಕತೆಯಲ್ಲಿ ದೇವರನ್ನು ಗುಡಿಯಲ್ಲಿ ಬಂಧಿಸುವುದಕ್ಕಿಂತ ಹೃದಯದಲ್ಲಿ ಬಂದಿಸಿ, ಜೊತೆಯಲ್ಲಿಯೇ ಭಗವಂತನನ್ನು ಇರಿಸಿಕೊಳ್ಳಿ ಎಂಬ ಅವರ ಮಾತು ಬಸವಣ್ಣನ ದೇಹವೇ ದೇಗುಲ ಎಂಬ ಮಾತಿಗೆ ಇಂಬು ನೀಡುವಂತಿದೆ ಎಂದು ಸಾಹಿತಿ ಪಳನಿಸ್ವಾಮಿ ಜಾಗೇರಿ ಹೇಳಿದರು.
ಸರ್ಕಾರಿ ಪ್ರೌಢ ಶಾಲೆ ಸೂರಾಪುರದಲ್ಲಿ ಎನ್ಎನ್ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಹಲವು ಸಾದು ಸಂತರು ನಮ್ಮ ಸಮಾಜವನ್ನು ಎಚ್ಚರಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದವರಲ್ಲಿ ಸಂತಸೇವಾಲಾಲ್ ಸಹ ಪ್ರಮುಖರು. ಅವರ ಭವಿಷ್ಯವಾಣಿ, ಸಮಾಜಸೇವೆ, ವೈದ್ಯಕೀಯ ಚಿಕಿತ್ಸಾಪದ್ಧತಿ, ವ್ಯಾಪರ ನೀತಿ, ಯುದ್ಧ ನೀತಿ ಬದುಕಿಗೆ ತೋರಿದ ಸನ್ಮಾರ್ಗ ಪ್ರಸ್ತುತ ಅವಶ್ಯಕವಾಗಿದೆ. ಎಲೆ ಮರೆಕಾಯಾಗಿದ್ದ ಈ ಸಮಾಜ ಸೇವಕರನ್ನು ಸಂವಿಧಾನದ ಆಶಯದಂತೆ ಗುರುತಿಸಿ ಅವರ ಜಯಂತಿಯನ್ನು ಸರ್ಕಾರ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿ ಅವರ ವಿಚಾರವನ್ನು ಅನಾವರಣ ಗೊಳಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಲೋಕೇಶ್, ಸಿ ಆರ್ ಪಿ. ನಟರಾಜು, ಸಮಾಜ ಶಿಕ್ಷಕಿ ಆರ್ ಮೇರಿ ನಿರ್ಮಲಾ, ಸಹ ಶಿಕ್ಷಕರಾದ ಗೋವಿಂದರಾಜ್, ದೇವಿಕಾ, ಲಿಂಗರಾಜು, ಮಲ್ಲೇಶ್ ಇದ್ದರು.
ಶರಣರ ಸಂದೇಶಗಳನ್ನು ಅರಿತು ಅವುಗಳನ್ನು ಕಿಂಚಿತ್ತಾದರೂ ಪಾಲಿಸುವಂತಾಗಬೇಕು, ಮಹಾತ್ಮರ ಸೇವೆಯ ಕುರಿತ ಮಾಹಿತಿಗಳು ಲಭ್ಯವಾಗದಿದ್ದರೆ ಜನ ಸಂತಸದಿಂದ ಇರಲು ಸಾಧ್ಯವಿಲ್ಲ. ಸಂತ ಸೇವಾಲಾಲ್ ಮಾತುಗಳು, ಚಿಂತನೆಗಳನ್ನು ಎಲ್ಲರೂ ಪಾಲಿಸುವಂತಾಗಬೇಕು. ಶರಣ ಚಿಂತನೆಗಳು ಬದುಕಿನ ಭದ್ರಬುನಾದಿಗೆ ಸಹಕಾರಿ. ಮಕ್ಕಳು ಬಸವಣ್ಣ, ಬುದ್ಧ, ಅಂಬೇಡ್ಕರ್, ಸೇವಾಲಾಲ್ ಸೇರಿದಂತೆ ಇನ್ನಿತರ ದಾರ್ಶನಿಕರ ಹಾದಿಯಲ್ಲಿ ಸಾಗಬೇಕು.ಲೋಕೇಶ್, ಸುರಾಪುರ ಪ್ರೌಢಶಾಲೆ, ಮುಖ್ಯಶಿಕ್ಷಕರು