ಜನರ ಮೌಢ್ಯ ತೊಡೆದು ಹಾಕಲು ಶ್ರಮಿಸಿದ ಸೇವಾಲಾಲ್

KannadaprabhaNewsNetwork | Published : Feb 16, 2025 1:45 AM

ಸಾರಾಂಶ

ಸೇವಾಲಾಲ್ ಅವರು ವಿವಿಧ ರಾಜ್ಯಗಳನ್ನು ಸುತ್ತಿ, ಅದಿವಾಸಿಗಳು, ಅಲೆ ಮಾರಿ ಸಮುದಾಯಗಳಲ್ಲಿ ಹೆಚ್ಚಾಗಿದ್ದ ಮೌಢ್ಯ, ಕಂದಾಚಾರವನ್ನು ಹೋಗಲಾಡಿಸಲು ಹಲವಾರು ಪ್ರಯತ್ನ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರುಸಂತ ಸೇವಾಲಾಲ್ ಮಹರಾಜರು, ಮೂರು ನೂರು ವರ್ಷಗಳ ಹಿಂದೆಯೇ ಜನರಲ್ಲಿದ್ದ ಮೌಢ್ಯವನ್ನು ತೊಡೆದು ಹಾಕಲು ಜೀವನ ಪರ್ಯಾಂತ ಶ್ರಮಿಸಿದ್ದರು ಎಂದು ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ, ತುಮಕೂರು ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘ, ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ 286ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂತ ಸೇವಾಲಾಲ್ ಅವರು ವಿವಿಧ ರಾಜ್ಯಗಳನ್ನು ಸುತ್ತಿ, ಅದಿವಾಸಿಗಳು, ಅಲೆ ಮಾರಿ ಸಮುದಾಯಗಳಲ್ಲಿ ಹೆಚ್ಚಾಗಿದ್ದ ಮೌಢ್ಯ, ಕಂದಾಚಾರವನ್ನು ಹೋಗಲಾಡಿಸಲು ಹಲವಾರು ಪ್ರಯತ್ನ ನಡೆಸಿದ್ದರು. ಆಯುರ್ವೇದ ಮತ್ತು ನ್ಯಾಚುರೋಪತಿ ವೈದ್ಯಕೀಯ ಪದ್ದತಿಗಳ ಮೂಲಕ ಜನರಲ್ಲಿ ಬದಲಾವಣೆ ತರಲು ಬಯಸಿದ್ದರು. ಆದರೆ ಇಂದಿಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಮೌಢ್ಯಕ್ಕೆ ತಲೆಬಾಗುವುದನ್ನು ನೋಡಿದರೆ ನಾಚಿಕೆ ಎನಿಸುತ್ತದೆ. ಸಂವಿಧಾನದಲ್ಲಿಯೂ ಮೌಢ್ಯಕ್ಕೆ ಅವಕಾಶವಿಲ್ಲ. ನಂಬಿಕೆಯೇ ಬೇರೆ, ಮೌಢ್ಯವೇ ಬೇರೆ ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಶಿಕ್ಷಣ ಬೇಕು. ಹಾಗಾಗಿ ಶಿಕ್ಷಣದ ಕಡೆಗೆ ಸೇವಾಲಾಲ್ ಮಹಾರಾಜರು ಪ್ರಯತ್ನ ಪಟ್ಟಿದ್ದರು ಎಂದು ನುಡಿದರು.ವಿಶ್ರಾಂತ ನ್ಯಾಯಾಧೀಶ ಗಣೇಶನಾಯಕ್ ಮಾತನಾಡಿ, ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸು ತ್ತಿದ್ದರೂ, ಉಪವಿಭಾಗಾಧಿಕಾರಿಗಳನ್ನು ಹೊರತುಪಡಿಸಿದರೆ, ಬೇರೊಬ್ಬ ಜನಪ್ರತಿನಿಧಿ ಇಲ್ಲ. ನಮ್ಮಿಂದ ಮತ ಪಡೆದ ನಂತರ ನಮ್ಮನ್ನು ಕಡೆಗಣಿಸುವ ಜನಪ್ರತಿನಿಧಿಗಳ ಬಗ್ಗೆ ನಾವು ಒಂದಾಗಿ ಪ್ರತಿರೋಧ ತೋರಬೇಕಾಗಿದೆ. ಹಾಗಾಗಬೇಕೆಂದರೆ ಮೊದಲು ನಮ್ಮಲ್ಲಿ ಒಗ್ಗಟ್ಟು ಮೂಡಬೇಕು ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಉಪಾಧ್ಯಕ್ಷ ಎಲ್. ಕುಬೇಂದ್ರನಾಯಕ್, ಇಂದು ವಿಶ್ವದ 118 ಕಡೆಗಳಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಗುತ್ತಿದೆ. ತಪಸ್ಸು, ಜ್ಞಾನ, ಭಕ್ತಿ ಎಂಬ ಮೂರು ಅಂಶಗಳ ಮೂಲಕ ಜನರಲ್ಲಿದ್ದ ಮೌಢ್ಯವನ್ನು ತೊಡೆದು ಹಾಕಲು ಶ್ರಮಿಸಿದ ಸಂತ ಸೇವಾಲಾಲರು, ತಮ್ಮ ಸೇವಾ ಕಾರ್ಯಗಳ ಮೂಲಕವೇ ಜನರಲ್ಲಿ ಆತ್ಮಾಭಿಮಾನ ಮತ್ತು ಆತ್ಮಸ್ಥೈರ್ಯವನ್ನು ತುಂಬಿದವರು. ಭಾತೃತ್ವದಿಂದ ಕೂಡಿದ ಸಮಾಜ ನಿರ್ಮಾಣ ಅವರ ಕನಸಾಗಿತ್ತು. ಸಾಮಾನ್ಯ ವ್ಯಕ್ತಿಯೊಬ್ಬ ದೇವರಾಗಿದ್ದು, ಸಂತ ಸೇವಾಲಾಲರ ಸಾಧನೆ ಎಂದರು.ಕೆ.ಇ.ಬಿ. ಕೃಷ್ಣಾನಾಯಕ್ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರೀಯ ಲಾನ್ ಟೆನ್ನಿಸ್ ಆಟಗಾರ್ತಿ ಕು.ಭೂಮಿಕಾ.ಕೆ., ಎನ್.ರಮೇಶ್ ಡಿಪೋ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ ಕುಮಾರ್, ತುಮಕೂರು ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಗೌರವಾಧ್ಯಕ್ಷ ದೇನಾ ನಾಯಕ್, ಅಧ್ಯಕ್ಷ ಡಿ.ನಾರಾಯಣನಾಯಕ್, ಉಪಾಧ್ಯಕ್ಷರಾದ ಯತೀಂದ್ರ ನಾಯಕ್, ಕುಬೇಂದ್ರನಾಯಕ್ ಎಲ್, ಪ್ರಧಾನ ಕಾರ್ಯದರ್ಶಿ ಶಂಕರ್ ಬಿ., ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಾನಾಯಕ್, ಸೇವಾಲಾಲ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಬೇಂದ್ರನಾಯಕ್, ಬಿ.ಎಸ್,ದೇವಿ ಬಾಯಿ, ಜಿ.ಪಂ.ಮಾಜಿ ಸದಸ್ಯೆ ಗಾಯಿತ್ರಿ ಬಾಯಿ ಉಪಸ್ಥಿತರಿದ್ದರು.

Share this article