ಕನ್ನಡಪ್ರಭ ವಾರ್ತೆ ಚೇಳೂರು
ಚರಂಡಿ ಸ್ವಚ್ಛತೆ ಮಾಡುವರು ಸುರಕ್ಷಾ ಕವಚ ಧರಿಸಿ ಹಾಗೂ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಬಳಸಿಯೇ ಸ್ವಚ್ಛತಾ ಕಾರ್ಯ ಮಾಡಬೇಕೆಂದು ಸರ್ಕಾರ ನಿಯಮ ರೂಪಿಸಿದ್ದರೂ, ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರಿಗಾಲು ಮತ್ತು ಬರಿಗೈಯಲ್ಲಿ ಚರಂಡಿಗೆ ಇಳಿಸಿ ಅಮಾನವೀಯವಾಗಿ ಚರಂಡಿಗಳ ಸ್ವಚ್ಛತೆ ಮಾಡಿಸುತ್ತಿದ್ದಾರೆ.ತಾಲೂಕಿನ ಚಾಕವೇಲು ಗ್ರಾಪಂ ಮುಖ್ಯ ರಸ್ತೆಯಿಂದ ಬಿಳ್ಳೂರು, ಪಾತಪಾಳ್ಯ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಚರಂಡಿ ಸ್ವಚ್ಛತೆ ಕಾರ್ಯವನ್ನು ಬರಿಗೈಯಲ್ಲಿ ಕೈಗೊಂಡಿದ್ದು ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ, ಪ್ರಾಣಕ್ಕೂ ಕುತ್ತು ಬರುವ ಮುನ್ಸೂಚನೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.ದುರ್ನಾತ ಬೀರುವ ಚರಂಡಿತುಂಬಿ ತುಳುಕುತ್ತಿರುವ ಚರಂಡಿ, ಮೂಗಿಗೆ ರಾಚುವ ದುರ್ನಾತ. ಇದರ ಅಕ್ಕಪಕ್ಕದಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಅಸಹ್ಯಪಡುತ್ತಾ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಆದರೆ ಚರಂಡಿ ಸ್ವಚ್ಛತೆಗೆ ಮುಂದಾದ ಕೂಲಿ ಕಾರ್ಮಿಕರು ಮಾತ್ರ ಎಲ್ಲ ನೋವನ್ನು ನುಂಗಿಕೊಂಡೆ ದುಡಿಯಬೇಕಿದೆ. ಇವರಲ್ಲಿ ಬಹುತೇಕರು ಅನಕ್ಷರಸ್ಥರು, ಕಡುಬಡವರು. ಹೀಗಾಗಿ ಇವರಿಗೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಇಲ್ಲ. ಇವರ ಆರೋಗ್ಯ ರಕ್ಷಣೆ ಮತ್ತು ಪ್ರಾಣ ರಕ್ಷಣೆಯ ಬಗ್ಗೆ ತಿಳಿಸಬೇಕಾದವರೂ ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಇನ್ನೂ ಈ ಕುರಿತು ಪಿಡಿಒ ರವರನ್ನು ಸಂಪರ್ಕಿಸಿದ್ದು ಚರಂಡಿ ಸ್ವಚ್ಛತೆಯನ್ನು ಹದಿನೈದನೆಯ ಹಣಕಾಸು ಯೋಜನೆಯಡಿ ಗ್ರಾಪಂ ಸದಸ್ಯರು ಮಾಡಿಸುತ್ತಾರೆ. ನಮ್ಮ ಗ್ರಾಮ ಪಂಚಾಯತಿಯಲ್ಲಿ ನಾವು ಸ್ವಚ್ಛತಾ ಕಾರ್ಮಿಕರಿಗೆ ಸ್ವಚ್ಛತೆಯ ಪರಿಕರಗಳನ್ನು ಕೊಡುತ್ತೇವೆ, ಆದರೆ ದಿನಗೂಲಿಗಳಿಗೆ ಯಾವುದೇ ಪರಿಕರಗಳು ಕೊಡುವುದಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಾರೆ.ಅಧಿಕಾರಿ, ಗುತ್ತಿಗೆದಾರ ನಿರ್ಲಕ್ಷ್ಯ
ಚಾಕವೇಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವುದೆಲ್ಲಾ ಇಂತಹ ಕೆಲಸಗಳೇ. ಇಲ್ಲಿನ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಣ ಮುಖ್ಯವೇ ಹೊರತು ಚರಂಡಿ ಸ್ವಚ್ಚತೆಗೆ ಮುಂದಾದ ಕೂಲಿ ಕಾರ್ಮಿಕರ ಆರೋಗ್ಯ ಹಾಗೂ ಪ್ರಾಣ ರಕ್ಷಣೆ ಅಲ್ಲ.ಸ್ವಚ್ಛತೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಾರ್ಮಿಕರಿಗೆ ಸುರಕ್ಷಾ ಪರಿಕರ ನೀಡಬೇಕು. ಒಂದು ವೇಳೆ ನೀಡಿದ್ದರೆ ಇವುಗಳನ್ನು ಧರಿಸಿಯೇ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆಯೇ ಎಂದು ಗಮನಿಸಬೇಕಿದೆ. ಆದರೆ ಗುತ್ತಿಗೆದಾರರಾಗಲಿ ಅಥವಾ ಪಿಡಿಒ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.