ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ದಂಧೆಗೆ ಬ್ರೇಕ್ ಹಾಕಲು ಎಸ್‌ಎಫ್‌ಐ ಒತ್ತಾಯ

KannadaprabhaNewsNetwork |  
Published : May 08, 2026, 02:15 AM IST
 | Kannada Prabha

ಸಾರಾಂಶ

2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಬೆನ್ನಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ಮಿತಿಮೀರಿದ್ದು, ಇದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು ತಕ್ಷಣವೇ ರಚಿಸಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಬೆನ್ನಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ಮಿತಿಮೀರಿದ್ದು, ಇದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು ತಕ್ಷಣವೇ ರಚಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಉತ್ತರ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿರುವ ಸಂಘಟನೆಯು, ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.

ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ ಪ್ರತಿ ಖಾಸಗಿ ಶಾಲೆಯೂ ತಾನು ಪಡೆಯುವ ಶುಲ್ಕದ ವಿವರವನ್ನು ಶಾಲಾ ಜಾಲತಾಣ ಹಾಗೂ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಕಡ್ಡಾಯ. ಆದರೆ, ಜಿಲ್ಲೆಯ ಬಹುತೇಕ ಅನುದಾನ ರಹಿತ ಶಾಲೆಗಳು ಈ ನಿಯಮವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಪೋಷಕರಿಂದ ಲಕ್ಷಾಂತರ ರೂಪಾಯಿ ಡೊನೇಷನ್ ವಸೂಲಿ ಮಾಡುವ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿವೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಂಚಾಲಕ ಗಣೇಶ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳಲ್ಲಿ ಪುಸ್ತಕ, ನೋಟ್‌ಬುಕ್, ಬ್ಯಾಗ್, ಬೂಟು ಮತ್ತು ಸಮವಸ್ತ್ರಗಳನ್ನು ಶಾಲೆಯಲ್ಲೇ ಖರೀದಿಸಬೇಕು ಎಂದು ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದಕ್ಕಾಗಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಅಲ್ಲದೇ ಡೊನೇಷನ್ ಹಾವಳಿ ತಡೆಯಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತಕ್ಷಣವೇ ಪ್ರಾಧಿಕಾರ ರಚಿಸಬೇಕು. 15 ದಿನಗಳ ಒಳಗಾಗಿ ಶಿಕ್ಷಣ ಇಲಾಖೆ, ಸಂಸ್ಥೆಯ ಮುಖ್ಯಸ್ಥರು, ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಭೆ ಕರೆಯಬೇಕು. ಸರ್ಕಾರವೇ ಶಾಲಾ ಪ್ರವೇಶ ಶುಲ್ಕವನ್ನು ನಿಗದಿಪಡಿಸಿ ಮಾಧ್ಯಮಗಳ ಮೂಲಕ ಬಹಿರಂಗಪಡಿಸಬೇಕು. ಪ್ರತಿ ತಿಂಗಳು ಪಾಲಕರ ಸಭೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಕಡ್ಡಾಯವಾಗಬೇಕು. ಜಿಲ್ಲೆಯಲ್ಲಿರುವ ಅನಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಅಂತಹ ಸಂಸ್ಥೆಗಳನ್ನು ತಕ್ಷಣವೇ ಮುಚ್ಚಬೇಕು ಎಂಬ ಹಕ್ಕೊತ್ತಾಯಗಳನ್ನು ಮನವಿಯಲ್ಲಿ ಉಲ್ಲೇಖಿಸಿದೆ.

ಈ ಸಂದರ್ಭ ಜಿಲ್ಲಾ ಸಂಚಾಲನಾ ಸಮಿತಿಯ ಸದಸ್ಯರಾದ ವೀರೇಶ, ಯಲ್ಲಪ್ಪ, ಮಲ್ಲಿಕಾರ್ಜುನ, ಶೇಖಪ್ಪ, ಓಂಕಾರ, ಶಶಿಧರ್, ಅರ್ಜುನ, ಆಕಾಶ ಹಾಗೂ ಆದರ್ಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿ, ಪಕ್ಷಿ ನಿರ್ಲಕ್ಷಿಸಿದರೆ ಪರಿಸರ ನಾಶ: ಈಶ್ವರಪ್ಪ ಹಂಚಿನಾಳ
ಶಿಕ್ಷಕರ ಕೈಯಲ್ಲಿದೆ ಸರ್ಕಾರಿ ಶಾಲೆಗಳ ಭವಿಷ್ಯ: ಆನಂದಗೌಡ ಪಾಟೀಲ