ಹೊಸಪೇಟೆ: ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗೂ ಅತ್ಯಾಚಾರಗಳನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ರವಾನಿಸಲಾಯಿತು.
ರಾಜ್ಯದಲ್ಲಿ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗುತ್ತಿವೆ. ಎಲ್ಲ ಶಾಲಾ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಕೆ.ಎ. ಪವನ್ ಕುಮಾರ್ ಮಾತನಾಡಿ, ಒಡಿಶಾದ ಫಕೀರ್ ಮೋಹನ್ ಕಾಲೇಜಿನಲ್ಲಿ ಇತ್ತೀಚೆಗೆ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕ್ಯಾಂಪಸ್‌ಗಳಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾಲೇಜಿನ ಯೂನಿಯನ್ ಕಚೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶಾಲೆಯೊಳಗೆ ಮುಟ್ಟಿನ ತಪಾಸಣೆಗಾಗಿ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು. ಈ ಘಟನೆಗಳ ತೀವ್ರವಾಗಿ ವಿರೋಧ ವ್ಯಕ್ತವಾದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಡಿವೈಎಫ್‌ಐನ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ಆಟೋ ಯೂನಿಯನ್ ಸಂಘದ ರಾಜ್ಯ ಕಾರ್ಯದರ್ಶಿ ಸಂತೋಷ ಕುಮಾರ್ ಮಾತನಾಡಿದರು. ಎಸ್‌ಎಫ್‌ಐನ ತಾಲೂಕು ಮುಖಂಡರಾದ ಲೋಕೇಶ್, ರುದ್ರಮ್ಮ, ನಂದಿನಿ, ಶ್ವೇತಾ, ಮೀನಾಕ್ಷಿ, ವಿನಾಯಕ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.